

ಗುಳೇದಗುಡ್ಡ: ಅಕ್ಕಮಹಾದೇವಿ ಸಮಾಜದಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸರಿಸಮಾನ ಸ್ಥಾನಮಾನ ಕಲ್ಪಿಸಬೇಕೆಂದು 12ನೇ ಶತಮಾನದಲ್ಲಿಯೇ ತನ್ನ ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿ ಇಂದಿನ ಮಹಿಳೆಯರಿಗೆ ಆದರ್ಶವಾಗಿದ್ದಾಳೆ ಎಂದು ಅಕ್ಕಮಹಾದೇವಿ ದೇವಸ್ಥಾನದ ಕಸ್ತೂರಿಬಾಯಿ ಶರಣಮ್ಮನವರು ಹೇಳಿದರು.
ಪಟ್ಟಣದ ಚೌಬಜಾರ್‌ದಲ್ಲಿನ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಅಕ್ಕಮಹಾದೇವಿಯ ಜಯಂತಿಯ ಅಂಗವಾಗಿ ಶನಿವಾರ ಜರುಗಿದ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅಕ್ಕಮಹಾದೇವಿ ರಾಜನನ್ನು ಮದುವೆಯಾದರೂ ವೈಭೋಗದ ಜೀವನ ಬಿಟ್ಟು ಸಮಾಜದಲ್ಲಿದ್ದ ದೇವದಾಸಿ, ವಿಧವಾ ಪದ್ಧತಿ, ಸತಿಸಹಗಮನ ಪದ್ಧತಿಗಳಂತಹ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಕಲ್ಯಾಣಕ್ರಾಂತಿಯ ಮೂಲಕ ಹೋರಾಟಕ್ಕಿಳಿದರು ಎಂದರು.
ಅಕ್ಕಮಹಾದೇವಿ ಜಯಂತಿ ಅಂಗವಾಗಿ ಐದು ದಿನಗಳವರೆಗೆ ಕಸ್ತೂರಿಬಾಯಿ ಶರಣಮ್ಮನವರು ಪ್ರವಚನ ನೀಡಿದರು. ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಿತು.
ಅನ್ನಪೂರ್ಣ ವಸ್ತ್ರದ, ಸರೋಜಾ ಅಂಗಡಿ, ಕಸ್ತೂರಿ ನಾಯನೇಗಲಿ, ದಾಕ್ಷಾಯಿಣಿ ತೆಗ್ಗಿ, ಪ್ರೇಮಾ ಶೆಲ್ಲಿಕೇರಿ, ನೀಲಮ್ಮ ಕೆರೂರ, ನೀಲಕ್ಕ ಎಳೆಮೇಲಿ, ಶಾರದಾ ಜಿರಲಿ, ಪಾರ್ವತಿ ಶೆಟ್ಟರ್, ಶಂಕ್ರಮ್ಮ ಬ್ಯಾಳಿ, ಶೇಖವ್ವ ಸಂಪಗಾವಿ, ಉಮಾ ವಾಳದ, ವಿದ್ಯಾ ಕರಣಿ ಮತ್ತಿತರಿದ್ದರು.