

ಚಾಮರಾಜನಗರ : ಜಾಗತಿಕ ಮಟ್ಟದಲ್ಲಿ ದೇಶ ಮುಂದುವರಿಯುತ್ತಿದೆ. ಆದರೂ ನಮ್ಮ ಸಮಾಜದಲ್ಲಿ ಬಾಲ್ಯ ವಿವಾಹ ಎಂಬ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.
ರಾಜ್ಯ ಮಕ್ಕಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಕೊಳ್ಳೇಗಾಲ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಬಾಲ್ಯ ವಿವಾಹಕ್ಕೊಳಗಾದ ಮಕ್ಕಳು ಆರೋಗ್ಯ ಸಮಸ್ಯೆಗೆ ಒಳಗಾಗುತ್ತಾರೆ. ಅವರ ಕುಟುಂಬವೂ ಆರ್ಥಿಕ ಸಮಸ್ಯೆಗೆ ಸಿಲುಕುತ್ತದೆ. ನಮ್ಮಲ್ಲಿ ಇನ್ನು ಪರಿಣಾಮಕಾರಿಯಾಗಿ ಬಾಲ್ಯ ವಿವಾಹ ತಡೆಗೆ ಇಲಾಖೆ ಕೆಲಸ ಮಾಡಬೇಕಿದೆ. ಮಕ್ಕಳ ಪರವಾಗಿ ಸಾಕಷ್ಟು ಕಾನೂನುಗಳಿದ್ದರೂ ಏಕೆ ಪ್ರಕರಣಗಳು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ನಮ್ಮ ಮುಂದಿದೆ. ಆದ್ದರಿಂದ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಮಕ್ಕಳ ಕಾನೂನು ರಕ್ಷಣೆಗೆ ಮುಂದಾಗಬೇಕು ಎಂದರು.
ಸಮಾಜದ ಎಲ್ಲ ಮಕ್ಕಳನ್ನು ನಮ್ಮ ಮಕ್ಕಳಂತೆ ತಿಳಿದುಕೊಳ್ಳಬೇಕು. ಮಕ್ಕಳ ರಕ್ಷಣೆ ಮಾಡಬೇಕು. ಮಕ್ಕಳ ಮೇಲೆ ಅತ್ಯಾಚಾರ ಆಗದಂತೆ, ಯಾವುದೇ ಮಗು ಮನೆ ಬಿಟ್ಟು ಹೊಗದಂತೆ, ಬಾಲ್ಯ ವಿವಾಹ ಆಗದಂತೆ, ಬಾಲ ಕಾರ್ಮಿಕ ಪದ್ಧತಿ ನಡೆಯದಂತೆ ಮುನ್ನೆಚರಿಕೆ ವಹಿಸಬೇಕಿದೆ ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸರಸ್ವತಿ, ಜಿಲ್ಲಾ ಮಕ್ಕಳ ಘಟಕ ಅದಿಕಾರಿ ಚೆಲುವರಾಜ್, ಡಯಟ್ ಉಪನ್ಯಾಸಕಿ ಗೀತಾ, ಯಳಂದೂರು ಉಪ ತಹಸೀಲ್ದಾರ್ ಪುಷ್ಪಾವತಿ, ಟಿಎಚ್‌ಒ ಗೋಪಾಲ್, ಶ್ರೀಧರ್, ಡಿವೈಎಸ್ಪಿ ಜಿ.ಯು. ಸೋಮೆಗೌಡ, ಪಿಎಂಎಸ್‌ಆರ್ ತಾಲೂಕು ಕಾರ್ಯದರ್ಶಿ ಆರ್ಡಿಸ್ ಅರ್ನಾಲ್ಡ್ ಮತ್ತಿತರಿದ್ದರು.
ಫೋಟೋ ಕಳುಹಿಸಲಾಗುವುದು