ವಚನಗಳಲ್ಲಿದೆ ಸಂಸ್ಕಾರ ನೀಡುವ ಶಕ್ತಿ

25 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ವಚನಗಳು ಮೌಲ್ಯಗಳ ಕಣಜ. ಅವು ನಮ್ಮ ಮೌಲ್ಯಾಧಾರಿತ ಬದುಕಿನ ಸರಳ ಪಾಠಗಳು. ನಮ್ಮ ಬದುಕನ್ನು ತಿದ್ದಿ ಸಂಸ್ಕಾರಗೊಳಿಸುವ ದಿವ್ಯ ಶಕ್ತಿ ವಚನಗಳಲ್ಲಿದೆ ಎಂದು ಹಿರಿಯ ಸಾಹಿತಿ ಡಾ. ರುದ್ರಣ್ಣ ಚಿಲುಮಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಶಕುಂತಲಾ ಅಯ್ಯನಗೌಡರ ಮತ್ತು ಡಾ. ಎಸ್​.ವಿ. ಅಯ್ಯನಗೌಡರ ದತ್ತಿ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ವಚನ ಸಾಹಿತ್ಯದಲ್ಲಿ ಮೌಲ್ಯಗಳು ಕುರಿತು ಉಪನ್ಯಾಸ ನೀಡಿದರು.

ವಿಶ್ವಗುರು ಬಸವಣ್ಣನವರು ಆಡು ಭಾಷೆಯನ್ನೇ ದೇವಭಾಷೆಯನ್ನಾಗಿ ಮಾಡಿದರು. ವಚನಗಳ ಮೂಲಕ ದಯೆ, ಮಾನವೀಯತೆ, ಸರಳತೆ, ಸಹೋದರತೆ, ಸಮಾನತೆ ಹಾಗೂ ಸಮ ಸಮಾಜ ನಿರ್ಮಾಣದಂತಹ ಮೌಲ್ಯಾಧಾರಿತ ವಿಚಾರಗಳನ್ನು ಬಿತ್ತಿದರು. ಶರಣರು ವಚನಗಳ ಮೂಲಕ ಸ್ವಯಂ ಚಿಂತನೆಯ ಅರಿವಿನ ಬೀಜವನ್ನು ಬಿತ್ತಿದರು. ವಚನಗಳಲ್ಲಿ ನುಡಿದಂತೆ ನಡೆಯಬೇಕೆಂಬ ಸತ್ಯದ ಪ್ರತಿಪಾದನೆ ಇದೆ. ಅಹಿಂಸೆಗೆ ಶರಣರು ಅವಕಾಶ ನೀಡಲಿಲ್ಲ. ಸರಳ ಜೀವನ ನಡೆಸುವ ಮೂಲಕ ಮಾದರಿಯಾದರು. ಮನುಷ್ಯನೂ ಮಹಾದೇವನಾಗಬಲ್ಲ ಎಂಬುದನ್ನು ವಚನ ಸಾಹಿತ್ಯ ನಮಗೆ ತಿಳಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಂಕರ ಗುರವ ಅವರು ಶರಣರಾದ ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿಯರ ವಚನಗಳ ಶಿರೋನಾಮೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಕೃತಿಕಾರರ ನಿರಂತರ ಶ್ರಮದಿಂದ ಇಂತಹ ಮೌಲಿಕ ಕೃತಿ ಪ್ರಕಟಣೆಯಾಗಲು ಸಾಧ್ಯವಾಗಿದೆ. ಸಂಶೋಧಕರಿಗೆ ಮಾರ್ಗದರ್ಶಿಯಾದೆ ಎಂದರು.

ಡಾ. ಎಸ್​.ವಿ. ಅಯ್ಯನಗೌಡರ, ಶಕುಂತಲಾ ಅಯ್ಯನಗೌಡರ, ಸತೀಶ ತುರಮರಿ, ವಿಕಾಸ ಅಯ್ಯನಗೌಡರ, ವಿನಯ, ಗೀತಾ ಕುಂಬಿ, ಎಸ್​.ಕೆ. ಕುಂದರಗಿ, ಸಿ.ಎಂ. ಕುಂದಗೋಳ, ಇತರರು ಇದ್ದರು.

ಶಂಕರ ಕುಂಬಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ಮೇಘಾ ಹುಕ್ಕೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net