

ತುಮಕೂರು: ಯಾವುದೇ ಪ್ರಯಾಣದ ಹಿನ್ನೆಲೆ ಇಲ್ಲದವರಿಗೂ ಕರೊನಾ ಸೋಂಕು ತಗುಲುತ್ತಿರುವುದು ಆತಂಕ ಮೂಡಿಸಿದೆ. ರೋಗ ಲಕ್ಷಣ ಕಾಣಿಸಿದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಮನವಿ ಮಾಡಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ, ಎಲ್ಲರೂ ಪರಸ್ಪರ ಅಂತರ, ಮಾಸ್ಕ್ ಸೇರಿ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು ಎಂದರು. ಜಿಲ್ಲೆಯಲ್ಲಿ 57 ಕರೊನಾ ಪ್ರಕರಣಗಳ ಪೈಕಿ ಚಿಕ್ಕನಾಯಕನಹಳ್ಳಿ 2, ಗುಬ್ಬಿ 3, ಕೊರಟಗೆರೆ, ಕುಣಿಗಲ್ ತಲಾ 1, ಮಧುಗಿರಿ 4, ಪಾವಗಡ 5, ಶಿರಾ 15, ತಿಪಟೂರು 3, ತುಮಕೂರು 19, ತುರುವೇಕೆರೆ 4 ಜನರಿದ್ದಾರೆ ಎಂದರು. ಬೇರೆ ರಾಜ್ಯ, ಜಿಲ್ಲೆಗಳಿಂದ ಬಂದವರಿಂದಲೇ ಪ್ರಕರಣಗಳು ಹೆಚ್ಚಾಗಿವೆ, ಈವರೆಗೂ 15440 ಜನರಿಗೆ ಪರೀಕ್ಷೆ ನಡೆಸಲಾಗಿದ್ದು, 14232 ವರದಿ ನೆಗೆಟಿವ್ ಬಂದಿವೆ. ಇನ್ನೂ 961 ಜನರ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿಗೆ ಕಾಯುತ್ತಿದ್ದೇವೆ. ಪ್ರತಿ ತಾಲೂಕು ಪ್ರಾಥಮಿಕ ಆಸ್ಪತ್ರೆಗಳಲ್ಲಿ ಕೋವಿಡ್-19 ಕೇರ್ ಸೆಂಟರ್ ಆರಂಭಿಸುವ ಚಿಂತನೆ ಸರ್ಕಾರದ ಮಟ್ಟದಲ್ಲಿದ್ದು, ಅಲ್ಲಿಯೇ ಚಿಕಿತ್ಸೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಕ್ವಾರಂಟೈನ್ ಕೇಂದ್ರಗಳು ಹಾಗೂ ಕೋವಿಡ್ ಆಸ್ಪತ್ರೆಯಲ್ಲಿ ಗುಣಮಟ್ಟದ ಆಹಾರ ಒದಗಿಸುವಂತೆ ಸೂಚಿಸಿದ್ದೇನೆ, ಈ ಬಗ್ಗೆ ನಿಗಾ ವಹಿಸಲು ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‌ಗಳಿಗೂ ಸೂಚಿಸಿದ್ದೇನೆ ಎಂದರು. ಜಿಪಂ ಸಿಇಒ ಶುಭಾಕಲ್ಯಾಣ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ, ಡಿಹೆಚ್‌ಒ ಡಾ.ನಾಗೇಂದ್ರಪ್ಪ, ಡಿಎಸ್ ಡಾ.ವೀರಭದ್ರಯ್ಯ ಮತ್ತಿತರರು ಇದ್ದರು.
ಪ್ರಾಥಮಿಕ ಸಂಪರ್ಕದವರು ಸಿಕ್ಕಿಲ್ಲ!: ತುಮಕೂರಿನಲ್ಲಿ ಕೋವಿಡ್19 ಪರೀಕ್ಷಾ ಕೇಂದ್ರ ಇರುವುದರಿಂದ ಫಲಿತಾಂಶ ವಿಳಂಬವಾಗುತ್ತಿಲ್ಲ. ಮಾಧ್ಯಮಗಳಿಗೆ ಸೋಂಕಿತರ ಮಾಹಿತಿ ನೀಡುವುದಕ್ಕಿಂತಲೂ ಮುಖ್ಯವಾಗಿ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಕ್ವಾರಂಟೇನ್ ಮಾಡಲು ಜಿಲ್ಲಾಡಳಿತ ಆದ್ಯತೆ ನೀಡಿದೆ. ಪ್ರಾಥಮಿಕ ಸಂಪರ್ಕದಲ್ಲಿದ್ದವರು ಭಯಕ್ಕೆ ಪೋನ್ ಸ್ವಿಚ್ಡ್ ಆ್ ಮಾಡಿಕೊಂಡಿದ್ದೂ ಇದೆ. ಹಾಗಾಗಿ, ಜಿಲ್ಲೆಯ ಜನರು ಜಿಲ್ಲಾಡಳಿತದೊಂದಿಗೆ ಸಹಕಾರ ನೀಡುವ ಮೂಲಕ ಮಹಾಮಾರಿ ಕರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಮನವಿ ಮಾಡಿದರು.
ಅವರವರ ಮನೆಯಲ್ಲಿ ಕ್ವಾರಂಟೈನ್: ತುಮಕೂರು ಜಿಲ್ಲೆಯಲ್ಲಿ ವಿವಿಧ ದೇಶಗಳಿಂದ 65 ಜನರು ಆಗಮಿಸಿದ್ದು, ಎಲ್ಲರ ಗಂಟಲು ದ್ರವ ಪರೀಕ್ಷೆ ಬೆಂಗಳೂರಿನಲ್ಲಿಯೇ ನಡೆಸಲಾಗಿದೆ. ತುಮಕೂರಿನಲ್ಲಿ 27 ಜನರಿಗೆ ಪರೀಕ್ಷೆ ನಡೆಸಲಾಗಿದ್ದು, 15 ಜನರ ವರದಿ ನೆಗೆಟಿವ್ ಬಂದಿದೆ. ಉಳಿದ 23 ಜನರ ವರದಿಗೆ ಜಿಲ್ಲಾಡಳಿತ ಕಾಯುತ್ತಿದ್ದು 58 ಜನರೂ ತುಮಕೂರಿನಲ್ಲಿ ಅವರವರ ಮನೆಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ನಡೆವೆಯೇ ಜನರನ್ನು ಓಡಾಡಲು ಬಿಟ್ಟು ಆರ್ಥಿಕ ಚಟುವಟಿಕೆ ಹೆಚ್ಚಿಸುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ. ಈ ಹಂತದಲ್ಲಿ ನಾಗರಿಕರು ಎಚ್ಚರಿಕೆಯಿಂದ ವರ್ತಿಸಬೇಕು, ಸಹಕಾರ ನೀಡಬೇಕು. ಡಾ.ಕೆ.ರಾಕೇಶ್‌ಕುಮಾರ್ ಜಿಲ್ಲಾಧಿಕಾರಿ