ಮೀಸಲಾತಿ ತೆಗೆಯುವ ನಿಲುವು ಸಂವಿಧಾನ ವಿರೋಧಿ

ಮೀಸಲಾತಿ ತೆಗೆಯುವ ನಿಲುವು ಸಂವಿಧಾನ ವಿರೋಧಿ
Published on

ಮೈಸೂರು: ಬಿಜೆಪಿಯ ಮೀಸಲಾತಿ ತೆಗೆದು ಹಾಕುವ ನಿಲುವು ಹಾಗೂ ಒಕ್ಕೂಟ ವ್ಯವಸ್ಥೆಯನ್ನು ತೊಡೆದು ಹಾಕಿ ಏಕಸ್ವಾಮ್ಯ ಅಧಿಕಾರ ಪ್ರತಿಪಾದಿಸುತ್ತಿರುವುದು ಸಂವಿಧಾನ ರಚನಾಕಾರರ ಆಶಯಕ್ಕೆ ವಿರುದ್ಧವಾಗಿದೆ ಎಂದು ಹಿರಿಯ ಪತ್ರಕರ್ತ ಮನೋಜ್ ಮಿತ್ತ ಹೇಳಿದರು.

ದಸರಾ ರಾಷ್ಟ್ರೀಯ ಸಮ್ಮೇಳನ ಉಪ ಸಮಿತಿ, ಮೈಸೂರು ವಿಶ್ವವಿದ್ಯಾಲಯ, ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ ಮಾನಸಗಂಗೋತ್ರಿ ವತಿಯಿಂದ ಸಂವಿಧಾನ ಅಂಗೀಕಾರದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಪ್ರಭುತ್ವ ಮತ್ತು ಸಂವಿಧಾನ ಆಶಯ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕೇಂದ್ರದ ವಿಚಾರಕ್ಕೆ ಹೆಚ್ಚು ಪ್ರಾಶಸ್ತ್ಯಕೊಡಲಾಗುತ್ತಿದೆ. ಇದರಿಂದ ರಾಜ್ಯದ ಹಕ್ಕು ಸ್ವಾತಂತ್ರ್ಯವನ್ನು ಕೇಂದ್ರದ ಕಾರ್ಯಾಂಗಗಳು ನಿರ್ವಹಿಸುವಂತಾಗಿದೆ ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದರು.

ಪ್ರಸ್ತುತ ಕೆಲ ಬೆಳವಣಿಗೆಗಳು 1965ರ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆಯಾದರೂ, ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ನೈತಿಕ ಪೊಲೀಸ್‌ಗಿರಿಯಂತಹ ಪ್ರಕರಣಗಳು ಹಾಗೂ ಪಾರದರ್ಶಕ ಪತ್ರಿಕೋದ್ಯಮದ ಮೇಲೆ ಕಡಿವಾಣ, ಶೈಕ್ಷಣಿಕ ಕೇಂದ್ರಗಳಲ್ಲಿ ಮುಕ್ತ ಪಾಠ ಪ್ರವಚನಕ್ಕೆ ಕಡಿವಾಣ, ಆರ್ಥಿಕ ಚಿಂತನೆಗಳಿಗೆ ಕಡಿವಾಣ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದರು.

ಭಾರತೀಯ ಸಂವಿಧಾನ ರಚಿಸಲು ದೇಶದ ವಿವಿಧ ಪ್ರಾಂತಗಳ ಕೊಡುಗೆಯೂ ಅಪಾರವಾಗಿದೆ. ಮೈಸೂರು ಒಡೆಯರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಗತಿಪರ ಕಾರ್ಯಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಹಿಂದುಳಿದ ವರ್ಗದವರ ಏಳಿಗೆಗೆ ಪ್ರಯತ್ನಿಸಿದ್ದರು ಎಂದರು.

ಇಂದಿರಾಗಾಂಧಿಯ 25ತಿಂಗಳ ತುರ್ತು ಪರಿಸ್ಥಿತಿ ಸಂವಿಧಾನದ ಕಗ್ಗೋಲೆಯಾಗಿದ್ದರೂ ಕೂಡ ಅಲ್ಲಿ ಸಾಕಷ್ಟು ಸುಧಾರಣಾ ನೀತಿಗಳನ್ನು ಜಾರಿಗೆ ತರಲಾಗಿದೆ. 1976ರ ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ ಮೂಲಕ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಕರ್ನಾಟಕ ಮೂಲದ ಎಸ್.ಎಂ.ಸಿದ್ದಯ್ಯ ಅವರ ಆಶಯಗಳು ಒಳಗೊಂಡಿದ್ದವು. ತದನಂತರ 1989ರಲ್ಲಿ ರಾಜೀವ್ ಗಾಂಧಿ ಅವಧಿಯಲ್ಲಿ ದಲಿತ ದೌರ್ಜನ್ಯ ಕಾಯಿದೆಯನ್ನು ಜಾರಿಗೆ ತರಲಾಯಿತು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಇಂಡಿಯಾ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆಯ ಕುಲಪತಿ ಪ್ರೊ. ಸುಧೀರ್ ಕೃಷ್ಣಸ್ವಾಮಿ ಮಾತನಾಡಿ, 1919 ಮತ್ತು 1935ರ ಅವಧಿಯಲ್ಲಿ ಭಾರತೀಯ ಸರ್ಕಾರಿ ಕಾಯ್ದೆಯನ್ನು ಹೊರತುಪಡಿಸಿ ದೇಶದ ವಿವಿಧ ಪ್ರಾಂತ್ಯಗಳನ್ನು ಒಳಗೊಂಡು 40ಕ್ಕೂ ಹೆಚ್ಚು ಸಂವಿಧಾನಗಳು ರಚಿಸಲ್ಪಟ್ಟಿದ್ದವು. ಅವುಗಳಲ್ಲಿ, ಮೈಸೂರು ರಾಜಾಡಳಿತದ ಸಂವಿಧಾನವೂ ಒಂದಾಗಿದ್ದು, ಅವು ಹೆಚ್ಚಿನ ಅಧಿಕಾರವನ್ನು ರಾಜಪ್ರಭುತ್ವಕ್ಕೆ ಮೀಸಲಿಟ್ಟದ್ದವು. ಅಲ್ಲದೆ ಸಾಕಷ್ಟು ಪ್ರಗತಿಪರ ಆಶಯಗಳನ್ನು ಒಳಗೊಂಡಿದ್ದವು. 1940ರಲ್ಲಿ ಶ್ರೀನಿವಾಸ ಐಯ್ಯಂಗಾರ್ ಎನ್ನುವವರು ಮೈಸೂರಿನ 17 ಪುಟಗಳ ಸಂವಿಧಾನ ರಚಿಸಿದ್ದರು ಎಂದು ವಿವರಿಸಿದರು.

ದಕ್ಷಿಣ ಆಫ್ರಿಕ ಮತ್ತು ಬಾಂಗ್ಲಾದೇಶಗಳಲ್ಲಿ ಇತ್ತೀಚೆಗೆ ಆಡಳಿತ ವಿಫಲಗೊಂಡಿದ್ದು, ಇದಕ್ಕೆ ಸಂವಿಧಾನದ ಸಮರ್ಪಕ ಅಧ್ಯಯನದ ಕೊರತೆಯೇ ಆಗಿದೆ. ಭಾರತೀಯರಾದ ನಾವು ಸಂವಿಧಾನದ ಅಮೃತಮಹೋತ್ಸವದ ಕಾಲದಲ್ಲಿ ಸಂವಿಧಾನ ರಚನಾ ಅಧಿವೇಶನದಲ್ಲಿ ನಡೆದ ಚರ್ಚೆಗಳ ಬಗ್ಗೆ ಅರಿತುಕೊಂಡರೆ ಹಾಗೂ ಸಂವಿಧಾನ ರಚನೆಯ ಹಿಂದಿರುವ ವಿವಿಧ ಚರ್ಚೆಗಳನ್ನು ಅರ್ಥೈಸಿಕೊಂಡರೆ ಉಜ್ವಲ ಭವಿಷ್ಯದ ಭಾರತವನ್ನು ಕಾರಣಬಹುದಾಗಿದೆ ಎಂದರು.

ಸಂವಿಧಾನದ ಕರಡು ರಚನೆಯಲ್ಲಿ ಬೆನಗಲ್ ನರಸಿಂಹರಾವ್ ಹಾಗೂ ಕೆಂಗಲ್ ಹನುಮಂತಯ್ಯ ಅವರ ಕೊಡುಗೆ ಗುರುತರವಾಗಿದೆ. ಇವರ ಪಾತ್ರವನ್ನು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಕೂಡ ಸ್ಮರಿಸಿದ್ದರು. ಕುವೆಂಪು ಪ್ರಾಧಿಕಾರ ಸುವಾರು 10 ಸಂಪುಟಗಳಲ್ಲಿ ಸಂವಿಧಾನ ರಚನೆ ಕುರಿತ ಚರ್ಚೆಯ ಬಗ್ಗೆ ಪುಸ್ತಕಗಳನ್ನು ಹೊರ ತಂದಿದ್ದು ಇದರ ಅಧ್ಯಯನ ಹೆಚ್ಚಾಗ ಬೇಕೆಂದರು.

ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಪರಿಷತ್‌ನ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಮಾತನಾಡಿ, ಭಾರತಕ್ಕೆ ಸ್ವಾತಂತ್ರೃ ಲಭಿಸಿದ ಸಂದರ್ಭ ಇದ್ದ ಹಸಿವು, ಅಸಮಾನತೆ, ಆರ್ಥಿಕ ದುರ್ಬಲತೆ, ಅಸುರಕ್ಷತೆ, ಶಿಕ್ಷಣದಿಂದ ವಂಚಿತ ಘಟನೆಗಳು ಈಗ ಇಲ್ಲ. ಇದಕ್ಕೆ ಅಂಬೇಡ್ಕರ್ ಅವರ ಸಂವಿಧಾನದ ಆಶಯವೇ ಆಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂವಿಧಾನದ ಕುರಿತು ಅರಿತುಕೊಳ್ಳುವಂತೆ ಆಗಬೇಕು. ವೈಜ್ಞಾನಿಕ ಬದಲಾವಣೆಗಳಾದರೆ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ. ದೇಶದಲ್ಲಿ ಉನ್ನತ ಗುಣಮಟ್ಟದ ಶಿಕ್ಷಣ ನೀಡವಂತಾಗಬೇಕು. ಆಗ ಯುವ ಶಕ್ತಿ ಈ ದೇಶದಲ್ಲೇ ಉಳಿದುಕೊಳ್ಳುವ ಮೂಲಕ ದೇಶದ ಆಸ್ತಿಯಾಗಿ ಮಾರ್ಪಾಡಾಗುತ್ತಾರೆ ಎಂದರು.

ಮೈಸೂರು ಜಿಲ್ಲಾಧಿಕಾರಿ ಜೆ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಕಾರ್ಯಕ್ರಮದ ಕುರಿತು ಶುಭಕೋರಿದರು. ಜಿಲ್ಲಾಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ, ಪ್ರೊ. ಜಿ. ಸೋಮಶೇಖರ್, ಬಸವರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net