ಕನ್ನಡದ ಸ್ಥಾನ ಅತಿ ಕಡಿಮೆ ಆಗಿದೆ: ಶರಣ ಸಾಹಿತ್ಯ ಪರಿಷತ್ ನಗರ ಘಟಕ ಅಧ್ಯಕ್ಷ ಮ.ಗು. ಸದಾನಂದಯ್ಯ ಬೇಸರ

Published on

ಮೈಸೂರು: ಜಿಲ್ಲಾಡಳಿತದಿಂದ ಆಯೋಜಿಸಿರುವ ಮೈಸೂರು ಫೆಸ್ಟ್ ಪ್ರಚಾರಕ್ಕಾಗಿನ ಲೋಗೋಗಳಲ್ಲಿ ಕನ್ನಡದ ಸ್ಥಾನ ಅತಿ ಕಡಿಮೆ ಆಗಿದ್ದು, ಇಂಗ್ಲಿಷ್‌ಗೆ ಪ್ರಾಧಾನ್ಯತೆ ನೀಡಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ ನಗರ ಘಟಕ ಅಧ್ಯಕ್ಷ ಮ.ಗು. ಸದಾನಂದಯ್ಯ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹೊರ ತರಲಾದ ಕನ್ನಡ ಅಂಕಿ ಆಧಾರಿತ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸರ್ಕಾರದ ಆದೇಶದ ಪ್ರಕಾರ ಶೇ.60ರಷ್ಟು ಕನ್ನಡ ಇರಬೇಕು. ಆದರೆ ಮೈಸೂರು ಫೆಸ್ಟ್ ಲೋಗೋಗಳಲ್ಲಿ ಶೇ.70ರಷ್ಟು ಇಂಗ್ಲಿಷ್ ಇದ್ದು, ಕನ್ನಡಕ್ಕೆ ಶೇ.30 ರಷ್ಟು ಮಾತ್ರ ಅವಕಾಶವಿದೆ. ಇದು ಕನ್ನಡ ಬಳಕೆ ಕುರಿತ ರಾಜ್ಯ ಸರ್ಕಾರದ ನಿಯಮದ ಉಲ್ಲಂಘನೆ ಆಗಿದೆ. ಲೋಗೋ ಸಿದ್ಧಪಡಿಸುವವರಿಗೆ ಈ ಕುರಿತು ಮಾಹಿತಿ ನೀಡಬೇಕಾಗಿತ್ತು. ಆದ್ದರಿಂದ ಈಗಲಾದರೂ ಆಗಿರುವ ಲೋಪವನ್ನು ಜಿಲ್ಲಾಡಳಿತ ಸರಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ನಗರದ ಬಡಾವಣೆ, ಬೀದಿಗಳಿಗೆ ಇರುವ ಮಾರ್ಗದರ್ಶಿ ಫಲಕಗಳಲ್ಲಿ ಈ ಹಿಂದಿನ ರೀತಿಯ ಮನೆಗಳ ಸಂಖ್ಯೆ ಮಾಹಿತಿ ಕಾಣೆಯಾಗಿದೆ. ಕೇವಲ ಜನಪ್ರತಿನಿಧಿಗಳು, ರಾಜಕಾರಣಿಗಳ ಹೆಸರೇ ಇವೆ. ಈ ಬಗ್ಗೆ ಪಾಲಿಕೆ, ಮುಡಾ ಗಮನ ಹರಿಸಬೇಕು ಕೋರಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಚಂದ್ರಶೇಖರ್,ಪದಾಧಿಕಾರಿಗಳಾದ ಜಿ.ಪ್ರಕಾಶ್, ಕೆಂಪಣ್ಣ, ಗಣೇಶ್ ನಿಲುವಾಗಿಲು, ಡಾ.ಟಿ.ತ್ಯಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net