

ಮೈಸೂರು: ಧರ್ಮಗುರುಗಳಾಗುವುದು ಪೂರ್ಣ ಅಧ್ಯಯನ ಮತ್ತು ಅಧ್ಯಾತ್ಮ ಸಾಧನೆಯಿಂದ ದೊರೆಯುವ ಒಂದು ಸೇವಾವಕಾಶವೇ ಹೊರತು ಅರ್ಜಿ ಹಾಕಿ ಗಳಿಸುವ, ಅದೃಷ್ಟದಿಂದ ಅಥವಾ ಬಂಡವಾಳ ವಿನಿಯೋಗಿಸಿ ಲಾಭ ಗಳಿಸುವ ಉದ್ಯಮವಲ್ಲ ಎಂದು ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅಭಿಪ್ರಾಯಪಟ್ಟರು.
ನಗರದ ಶ್ರೀಕುಂದೂರು ಮಠದ ಗದ್ದಿಗೆಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಡಾ.ಇಮ್ಮಡಿ ಶಿವಬಸವ ಸ್ವಾಮೀಜಿ ಅವರ 85ನೇ ಜಯಂತಿ ಸಂಸ್ಮರಣೋತ್ಸವ, ಶ್ರೀ ಡಾ.ಶರತ್‌ಚಂದ್ರ ಸ್ವಾಮಿಗಳ ಪಟ್ಟಾಧಿಕಾರ ರಜತ ಮಹೋತ್ಸವ ಹಾಗೂ ವಿದ್ಯಾರ್ಥಿನಿಲಯ, ಗ್ರಂಥಾಲಯ ಕಟ್ಟಡದ ಭೂಮಿಪೂಜೆ ಹಾಗೂ ಗ್ರಂಥಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಸೇವೆಗಾಗಿ ಧರ್ಮಗುರುಗಳಾಗಬೇಕೆನ್ನುವ ಮತ್ತು ಧರ್ಮಗುರುಗಳಾದವರು ಹೆಚ್ಚು ಅಧ್ಯಯನಶೀಲರಾಗಬೇಕು. ನಡೆ-ನುಡಿಗಳು ಸಾತ್ವಿಕವಾಗಿರುವ ಜತೆಗೆ ಅಗಾಧವಾದ ಮಾನಸಿಕ ಸಿದ್ಧತೆ ಮತ್ತು ಸೇವಾ ಬದ್ಧತೆಗಳು ಅಗತ್ಯವಾಗುತ್ತವೆ ಎಂದರು.
ಈ ಹಿನ್ನೆಲೆಯಲ್ಲಿ ಧರ್ಮಗುರುಗಳಾದವರ ನಡೆ-ನುಡಿಗಳು ಸಾತ್ವಿಕತನದಿಂದ ಇರಬೇಕು. ಹಾಗಾದರೆ ಸೇವೆಯಲ್ಲೂ ಬದ್ಧತೆಯಿಂದ ಇರುತ್ತದೆ. ಭೌತಿಕ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರಗಳು ನೋಡಿಕೊಳ್ಳಲು ಸಾಧ್ಯವಿದ್ದರೂ ಸಮಾಜದ ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಡಲು ಅವುಗಳಿಗೆ ಸಾಧ್ಯವಾಗಲಾರದು ಎಂದು ಹೇಳಿದರು.
ಆದರೆ ಆ ಕಾರ್ಯವನ್ನು ಸಮರ್ಥವಾಗಿ ಮಾಡಲು ಧಾರ್ಮಿಕ ಮಠಗಳಿಗೆ, ಧರ್ಮಗುರುಗಳಿಗೆ ಸಾಧ್ಯವೆಂದು ಹೇಳಬಹುದು. ಯಾವುದೋ ಒಂದು ಮಠ ಅಥವಾ ಮಠಾಧಿಪತಿ ಎಲ್ಲೋ ಮಾಡಿದ ತಪ್ಪುಗಳನ್ನು ನಾವು ಸಾರ್ವತ್ರಿಕವಾಗಿ ಎಲ್ಲ ಮಠಗಳಿಗೆ ಅನ್ವಯಿಸುವುದು ಸರಿಯಲ್ಲ ಎಂದರು.
ಸರ್ಕಾರಗಳಿಗಿರುವ ಕಾನೂನಿನ ಅಧಿಕಾರ ಧರ್ಮಗುರುಗಳಿಗೆ ಇಲ್ಲದಿದ್ದರೂ ಮಠಾಧಿಪತಿಗಳು, ಜನಸಮುದಾಯ ಅವರ ಬಗೆಗೆ ಇಟ್ಟುಕೊಂಡಿರುವ ಶ್ರದ್ಧಾಭಕ್ತಿಗಳ ಬಲದಿಂದ, ನಿಜವಾದ ಅರ್ಥದಲ್ಲಿ ಸಮಾಜ ಜಾಗೃತಿ ಮತ್ತು ಸುಧಾರಣೆಯ ಕೆಲಸವನ್ನು ಸಮರ್ಪಕವಾಗಿ ಮಾಡಲು ಸಾಧ್ಯವಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ ಎಂದರು.
ಹನ್ನೆರಡನೆ ಶತಮಾನದ ಶರಣರ ವಿಚಾರಧಾರೆಯಂತೆ ಮಠಾಧೀಶರು ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳುವುದರ ಜತೆಗೆ, ಆಧ್ಯಾತ್ಮಿಕ ಸಾಧನೆಯನ್ನು ಮಾಡಿರಬೇಕು. ತೀವ್ರವಾದ ವೇಗದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ವಸ್ತುನಿಷ್ಟ ನೆಲೆಯಲ್ಲಿ ಸಮಾಜದ ಸೇವೆ ಸಲ್ಲಿಸುವಂತಾಗಬೇಕು ಎಂದರು.
ಡಾ.ಇಮ್ಮಡಿ ಶಿವಬಸವ ಸ್ವಾಮೀಜಿ ಅಂತಹ ಮಾದರಿ ಗುರುಗಳಾಗಿದ್ದರು. ಕುಂದೂರು ಮಠಾಧಿಪತಿಯಾಗಿದ್ದರೂ ಎಂದಿಗೂ ಅದನ್ನು ತೋರಿಸಿಕೊಳ್ಳದೆ ಎಲ್ಲರೊಡನೊಂದಾಗಿ ಕೇವಲ ಸಾಹಿತ್ಯಾಧ್ಯಯನ, ಸಂಶೋಧನೆ, ಸಾಹಿತ್ಯ ಸೃಷ್ಟಿ ಮತ್ತು ಪ್ರಸಾರ ಕಾರ್ಯಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ಸರಳ ಜೀವನ ಅವರದ್ದು ಎಂದು ಬಣ್ಣಿಸಿದರು.
ಸನ್ಯಾಸ ಧರ್ಮವನ್ನು ಸ್ವೀಕರಿಸಿದರೂ ಕಾವಿ ಧರಿಸದೆ ಶ್ವೇತವಸ್ತ್ರಧಾರಿಯಾಗಿದ್ದವರು. ಶರಣ ಸಂಸ್ಕೃತಿಯಂತೆ ಅಂತರಂಗ-ಬಹಿರಂಗ ಶುದ್ಧವಾಗಿದ್ದವರು. ಲೋಕ ಪ್ರಜ್ಞಾವಿಕಾಸಕ್ಕೆ ಸಾಹಿತ್ಯ ಒಂದು ಪ್ರಭಾವ ಪೂರ್ಣಮಾಧ್ಯಮ ಎಂಬುದನ್ನು ಮನಗಂಡು ಸಾಹಿತ್ಯ ಸೇವೆಗೆ ಆದ್ಯತೆ ಕೊಟ್ಟಿದ್ದವರು. ಸಾಹಿತ್ಯಭವನದಲ್ಲಿ ತಮ್ಮದೇ ಆದ ಹಣತೆ ಹಚ್ಚಿಟ್ಟವರು. ಸಾಂಪ್ರದಾಯಿಕ ಧರ್ಮಗುರುಗಳ ಸಾಲಿಗಿಂತ ನಾಡಿನ ವಿದ್ವತ್ ಕ್ಷೇತ್ರದ ಖ್ಯಾತನಾಮರ ಸಾಲಿನಲ್ಲಿ ಹೆಚ್ಚು ಪರಿಚಿತರು ಎಂದು ವರ್ಣಿಸಿದರು.
ಸುತ್ತೂರುಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ತುಮಕೂರು ಸಿದ್ಧಗಂಗಾಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ಅವರು ಇಮ್ಮಡಿದೀಪ್ತಿ ಚಿತ್ರಸಂಪುಟವನ್ನು, ಗದಗದ ತೋಂಟದಾರ್ಯ ಮಹಾಸಂಸ್ಥಾನ ಮಠದ ಡಾ.ಶ್ರೀತೋಂಟದ ಸಿದ್ದರಾಮಸ್ವಾಮೀಜಿ ಅವರು ದಿ ರಿಯಲ್ ಸ್ಟ್ಯಾಂಡ್ ಕೃತಿ ಬಿಡುಗಡೆ ಮಾಡಿದರು.
ಶ್ರೀಮಠದ ಮೊಬೈಲ್ ಆ್ಯಪ್ ಅನ್ನು ಕನಕಪುರ ದೇಗುಲಮಠದ ಡಾ.ಶ್ರೀಮುಮ್ಮಡಿ ನಿರ್ವಾಣ ಸ್ವಾಮೀಜಿ, ಮಿಲಿಂದ ಪ್ರಶ್ನೆ ಕೃತಿಯನ್ನು ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕದ ಕೊಡುಗೆ ಕೃತಿಯನ್ನು ನವದೆಹಲಿ ಕೇಂದ್ರೀಯ ಸಂಸ್ಕೃತ ವಿವಿಯ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ಬಿಡುಗಡೆ ಮಾಡಿದರು.
ಶಾಸಕರಾದ ಎಚ್.ಎಂ.ಗಣೇಶಪ್ರಸಾದ್, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಇತರರು ಇದ್ದರು.