ಖಾಲಿಯಾಯ್ತು ಬಾಂದಾರ, ಜೀವಜಲಕ್ಕೆ ಸಂಚಕಾರ, ಸೂರಣಗಿಯಲ್ಲಿ ತಡೆಗೋಡೆ ಕುಸಿದು ಅಪಾರ ನೀರು ಪೋಲು

13 lxr 1 bandara
Published on


ಮಲ್ಲು ಕಳಸಾಪುರ ಲಕ್ಷ್ಮೇಶ್ವರ
ತಾಲೂಕಿನ ಸೂರಣಗಿ ಗ್ರಾಮದ ಬಾಂದಾರಕ್ಕೆ ಅಳವಡಿಸಿದ ತಡೆಗೋಡೆ ಕಿತ್ತು ಸುಮಾರು 40 ಎಕರೆ ಪ್ರದೇಶದಲ್ಲಿ ಸಂಗ್ರಹಗೊಂಡಿದ್ದ ಅಪಾರ ಪ್ರಮಾಣ ನೀರು ಪೋಲಾಗಿದೆ..
ಸೂರಣಗಿ ಗ್ರಾಮಕ್ಕೆ ಹೊಂದಿಕೊಂಡು ಹರಿದಿರುವ ಹಳ್ಳಕ್ಕೆ ಅಡ್ಡಲಾಗಿ ನಿರ್ವಿುಸಿದ ಬಾಂದಾರಕ್ಕೆ ಹಲವು ವರ್ಷಗಳ ಹಿಂದೆ ಕ್ರಸ್ಟ್​ಗೇಟ್ ನಿರ್ವಿುಸಲಾಗಿದೆ. ಬಾಂದಾರದ ಹಿನ್ನೀರಿನ 40 ಎಕರೆ ಪ್ರದೇಶವನ್ನು ಕೆರೆಯನ್ನಾಗಿಸಿಕೊಳ್ಳಲಾಗಿದೆ. ಈ ಕೆರೆಯ ಅಭಿವೃದ್ಧಿಗಾಗಿ ಅನೇಕ ವರ್ಷಗಳಿಂದ ಗ್ರಾಪಂ ವತಿಯಿಂದ ನರೇಗಾದಡಿ ಲಕ್ಷಾಂತರ ರೂ. ಖರ್ಚು ಮಾಡಲಾಗಿದೆ. 2021ರಿಂದ 23 ರ ಅವಧಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ, 2023-24 ರಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಕೆರೆಯ ಸುತ್ತಲೂ ಕಲ್ಲಿನ ಪಿಚ್ಚಿಂಗ್( ತಡೆಗೋಡೆ) ನಿರ್ವಿುಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದಲೂ ಲಕ್ಷಾಂತರ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಮಾಡಲಾಗಿದೆ. ಅಲ್ಲದೆ, ಕಳೆದ ವರ್ಷ ರಿಲಯನ್ಸ್ ಫಂಡ್​ನಿಂದ ಬೃಹತ್ ತಡೆಗೋಡೆ ನಿರ್ವಿುಸಲಾಗಿದೆ. ಕಳೆದ 2 ವರ್ಷದಿಂದ ದೊಡ್ಡ ಮಳೆಯಿಲ್ಲದೇ ಖಾಲಿ ಇದ್ದ ಬಾಂದಾರ, ಕೆರೆ ಇತ್ತೀಚಿಗೆ ಸುರಿದ ಹಿಂಗಾರಿನ ಮಳೆಗೆ ಭರ್ತಿಯಾಗಿ ಕ್ರಸ್ಟ್ ಗೇಟ್ ಮೂಲಕ ಹರಿಯುತ್ತಿತ್ತು. ಆದರೆ, ತಡೆಗೋಡೆ ಕಾಮಗಾರಿ ಅವೈಜ್ಞಾನಿಕ, ಕಳಪೆಯಿಂದಾಗಿ ಮತ್ತು ಕ್ರಸ್ಟ್​ಗೇಟ್ ಸೋರಿಕೆಯಿಂದ ಸಂಗ್ರಹಗೊಂಡಿದ್ದ ಅಪಾರ ಪ್ರಮಾಣದಸ ನೀರು ಪೂರ್ಣ ಖಾಲಿಯಾಗಿದೆ. ಇದೀಗ ಗ್ರಾಪಂನವರು ನೀರು ನಿಲ್ಲಿಸಲು ಹರಸಾಹಸ ಪಡುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಬಾಂದಾರದ ಹಿನ್ನೀರಿನ ಪ್ರದೇಶವನ್ನು ಕೆರೆ ಎಂಬ ಹೆಸರಿನಲ್ಲಿ 4 ವರ್ಷಗಳಿಂದ ನರೇಗಾ ಯೋಜನೆಯಡಿ 1 ಕೋಟಿ ರೂ. ಖರ್ಚು ಮಾಡಿ ಹೂಳೆತ್ತುವ ಮತ್ತು ತಡೆಗೋಡೆ ನಿರ್ವಿುಸುವ ಕೆಲಸ ಮಾಡಲಾಗಿದೆ. ಸಾಮಾಜಿಕ ಸೇವಾ ಸಂಸ್ಥೆಯಿಂದಲೂ ಅಭಿವೃದ್ಧಿ ಮಾಡಲಾಗಿದೆ. ಆದರೆ, ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯಂದ ಕೋಟ್ಯಂತರ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.| ಪ್ರವೀಣ ಸೂರಣಗಿ- ಗ್ರಾಪಂ ಸದಸ್ಯ

ಬಾಂದಾರಕ್ಕೆ ಅಳವಡಿಸಿದ ಕ್ರಸ್ಟ್​ಗೇಟ್ ನಿರ್ವಹಣೆ ಕೊರತೆಯಿದೆ ಮತ್ತು ಸೋರಿಕೆಯಾಗುತ್ತಿದೆ. ಬಾಂದಾರದ ಹಿನ್ನೀರಿನ ಪ್ರದೇಶದಲ್ಲಿ ಜನ- ಜಾನುವಾರು, ಪ್ರಾಣಿ, ಪಕ್ಷಿಗಳ ಅನುಕೂಲಕ್ಕಾಗಿ, ಅಂತರ್ಜಲ ಮಟ್ಟ ಹೆಚ್ಚಳಕ್ಕಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇದೀಗ ತಡೆಗೋಡೆ ಒಡೆದು ನೀರು ನಿಲ್ಲದಂತಾಗಿರುವ ಬಗ್ಗೆ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು..ಕೃಷ್ಣಪ್ಪ ಧರ್ಮರ- ತಾಪಂ ಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net