

ಗುಂಡ್ಲುಪೇಟೆ: ಅಸ್ತಿಮಜ್ಜೆಯ ಶಸ್ತ್ರಚಿಕಿತ್ಸೆಗೆ ಹಣ ಹೊಂದಿಕೆಯಾಗದ ಪರಿಣಾಮ ತಾಲೂಕಿನ ಅಣ್ಣೂರುಕೇರಿ ಗ್ರಾಮದ ವಿದ್ಯಾರ್ಥಿನಿ ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ವಿಜಯವಾಣಿ 28 ಜೂನ್ 2020ರಂದು ಪ್ರಕಟಿಸಿದ್ದ ವರದಿಯನ್ನು ನೋಡಿದ ದಾನಿಗಳು 46 ಸಾವಿರ ರೂ. ನೆರವು ನೀಡಿದ ಹೊರತು ಸರ್ಕಾರದಿಂದ ಯಾವುದೇ ಸಹಾಯ ದೊರಕದೆ ತಮ್ಮ ಮಗಳು ಸಾವಿಗೀಡಾದಳು ಎಂದು ಪಾಲಕರು ಬೇಸರ ವ್ಯಕ್ತಪಡಿಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿಯ ದೇಹದಲ್ಲಿ ಅಸ್ತಿಮಜ್ಜೆಯು ರಕ್ತವನ್ನು ಉತ್ಪತ್ತಿ ಮಾಡಲು ವಿಫಲವಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿಗೆ ಆಕೆಯ ತಂದೆಯ ಮೂಳೆಯನ್ನೇ ಕಸಿ ಮಾಡುವ ಮೂಲಕ ಶಸ್ತ್ರಚಿಕಿತ್ಸೆ ನಡೆಸಲು 15 ಲಕ್ಷ ರೂ.ಗಳನ್ನು ಪಾವತಿಸುವಂತೆ ವೈದ್ಯರು ತಿಳಿಸಿದ್ದರು.
ಶಾಸಕ ನಿರಂಜನಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 3 ಲಕ್ಷ ನೆರವು ಕೊಡಿಸುವ ಪ್ರಯತ್ನದಲ್ಲಿದ್ದರು. ಶಸ್ತ್ರಚಿಕಿತ್ಸೆಗೆ ಅಗತ್ಯವಾದ 15 ಲಕ್ಷ ರೂಪಾಯಿಗಳನ್ನು ಕಟ್ಟುವವರೆಗೆ ಮನೆಗೆ ಹೋಗಿ ಎಂದು ಆಸ್ಪತ್ರೆಯವರು ಕಳುಹಿಸಿದ್ದರು. ಮನೆಗೆ ಬಂದಾಗ ಮೂಗಿನಿಂದ ರಕ್ತ ಸೋರಲಾರಂಭಿಸಿದ್ದರಿಂದ ಪಾಲಕರು ಮಗುವನ್ನು ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ದರು. ಎರಡು ದಿನಗಳ ಚಿಕಿತ್ಸೆ ನಂತರ ಮಹದೇವಮ್ಮ ಸಾವಿಗೀಡಾದಳು. 3 ಲಕ್ಷ ರೂಪಾಯಿ ಕಟ್ಟದಿದ್ದರೆ ಮೃತ ದೇಹ ಕೊಡುವುದಿಲ್ಲ ಎಂದು ಆಸ್ಪತ್ರೆಯವರು ಪಟ್ಟುಹಿಡಿದರು.
ಈಗಾಗಲೇ ಸಾಲಮಾಡಿ 4 ಲಕ್ಷ ರೂ. ಕಟ್ಟಿದ್ದು ನಮ್ಮಲ್ಲಿ ಹಣವಿಲ್ಲ ಎಂದರೂ ಒಪ್ಪಲಿಲ್ಲ. ಕಡೆಗೆ ಶಾಸಕ ನಿರಂಜನಕುಮಾರ್ ಶಿಫಾರಸ್ಸು ಮಾಡುವ ಮೂಲಕ ಮಧ್ಯಾಹ್ನದ ವೇಳೆಗೆ ಮೃತದೇಹವನ್ನು ಪಡೆದುಕೊಳ್ಳಲಾಯಿತು ಎಂದು ಪಾಲಕರು ವಿಜಯವಾಣಿಗೆ ತಿಳಿಸಿದರು.