ಕಳ್ಳತನಕ್ಕೆ ಪೊಲೀಸ್ ಪೇದೆಯೇ ಗುರು

FotoJet
Published on

ಇಲಿಯಾಜ್ ಸೇರಿ 9 ಮಂದಿ ಬಂಧನ ಹಣ, ಒಡವೆ ಸುಲಿಗೆ ಮಾಡಿದ್ದ ತಂಡ ಗೌರಿಬಿದನೂರು ಪೊಲೀಸರ ಕಾರ್ಯಾಚರಣೆ

ಗೌರಿಬಿದನೂರು/ಚಿಕ್ಕಬಳ್ಳಾಪುರ: ಪೊಲೀಸ್ ಪೇದೆಯ ಮಾರ್ಗದರ್ಶನದಲ್ಲಿ ತರಬೇತಿ ಪಡೆದು, ಮನೆಯಲ್ಲಿ ಹಣ ಒಡವೆ ಸುಲಿಗೆ ಮಾಡಿದ್ದ 9 ಮಂದಿ ಆರೋಪಿಗಳನ್ನು ಗೌರಿಬಿದನೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೆಣ್ಣೂರು ಪೊಲೀಸ್ ಠಾಣೆ ಪೇದೆ ಎಂ.ಟಿ. ಇಲಿಯಾಜ್ (37), ಬೆಂಗಳೂರಿನ ಎಚ್.ಸಿದ್ದಯ್ಯ ರಸ್ತೆಯ ಚಾಂದ್ ಪಾಷಾ(35), ಚಾಮುಂಡಿನಗರದ ಫೈರೋಜ್ ಖಾನ್ (35), ಭೂಪಸಂದ್ರದ ಬಷೀರ್ ಅಹಮದ್ (49), ಡಿಜೆ ಹಳ್ಳಿಯ ತನ್ವೀರ್ (32), ಹೆಬ್ಬಾಳದ ಇರ್ಫಾನ್ ಪಾಷಾ (32), ಡಿಜೆ ಹಳ್ಳಿಯ ಅಮೀರ್ ಖಾನ್ (21), ದೊಡ್ಡಬಳ್ಳಾಪುರದ ಗಾಣಿಗರಪೇಟೆಯ ಸಾಬೀರ್ (42), ಗೌರಿಬಿದನೂರಿನ ಕರೇಕಲ್ಲಹಳ್ಳಿಯ ಬಾಬಾ ಜಾನ್ (38) ಆರೋಪಿಗಳು. ಬಂಧಿತರಿಂದ ಹಣ, ಒಡವೆ ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಆಸ್ತಿ ಮಾಹಿತಿ

ಗೌರಿಬಿದನೂರಿನ ಬಸವೇಶ್ವರ ನಗರದ ಶ್ರೀನಿವಾಸ್ ಎಂಬುವರು 2 ಕೋಟಿ ರೂ.ಗಳಿಗೂ ಹೆಚ್ಚು ಹಣ, ಒಡವೆ ಸಂಪಾದಿಸಿದ್ದಾನೆ ಎಂಬುದಾಗಿ ಭಾವಿಸಿ ಸುಲಿಗೆಕೋರರು ಕಳ್ಳತನಕ್ಕೆ ಸಂಚು ರೂಪಿಸಿ, ೆ.20ರಂದು ರಾತ್ರಿ 8.30ರ ಸಮಯದಲ್ಲಿ ಮನೆಯ ಮಾಲೀಕ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋಗಿರುವುದನ್ನು ಅರಿತು ದಾಳಿ ನಡೆಸಿ, ಮನೆಯಲ್ಲಿದ್ದವರನ್ನು ಬೆದರಿಸಿ ಒಡವೆ, ದಾಖಲೆ ತೆಗೆದುಕೊಂಡು ಪರಾರಿಯಾಗಿತ್ತು. ಈ ಬಗ್ಗೆ ಗೌರಿಬಿದನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳು ಜಾಡು

ಪ್ರಕರಣವನ್ನು ಭೇದಿಸಲು ಡಿವೈಎಸ್ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣಮ ಸಬ್ ಇನ್‌ಸ್ಪೆಕ್ಟರ್‌ಗಳಾದ ಗೋಪಾಲ, ಚಂದ್ರಕಲಾ, ಎನ್.ರಮೇಶ್ ಗುಗ್ಗರಿ, ಮೂರ್ತಿ, ಸಿಬ್ಬಂದಿ ಶ್ರೀರಾಮಯ್ಯ, ರಿಜ್ವಾನ್, ಶ್ರೀನಿವಾಸರೆಡ್ಡಿ, ಅಶ್ವತ್ಥಪ್ಪ, ಶಿವಶೇಖರ್, ಮಹಾಂತೇಶ, ನವೀನ್ ಕುಮಾರ್, ಚಂದ್ರಪ್ಪ ಯಲಿಗಾರ್, ಹನುಮಂತರಾಯ, ರವಿಕುಮಾರ್, ಮುನಿಕೃಷ್ಣರನ್ನೊಳಗೊಂಡ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ರಚಿಸಿದ್ದರು. ಅಪರಾಧ ನಡೆದ ಸ್ಥಳ ಹಾಗೂ ಗೌರಿಬಿದನೂರು ನಗರದ ವಿವಿಧ ಭಾಗಗಳಲ್ಲಿ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು, ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಿದ್ದರು. ಅದರಂತೆ ಆರೋಪಿ ಅಮೀನ್‌ನನ್ನು ಹಿಡಿದು ವಿಚಾರಣೆ ನಡೆಸಿದಾಗ ದುಷ್ಕೃತ್ಯದ ಸಂಚು ಬಯಲಾಗಿದೆ. ಇದರ ಮಾಹಿತಿಯನ್ನಾಧಾರಿಸಿ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ.

ವಿವಿಧೆಡೆ ಪ್ರಕರಣ

ಆರೋಪಿ ತನ್ವೀರ್ ಮೇಲೆ 2 ಕೊಲೆ, 2 ಕೊಲೆ ಪ್ರಯತ್ನ, 1 ದರೋಡೆ ಯತ್ನ ಸೇರಿ 5 ಪ್ರಕರಣಗಳು ದಾಖಲಾಗಿವೆ. ಹಾಗೆಯೇ ಡಿಜೆ ಹಳ್ಳಿ ಹಾಗೂ ಕೊಡಿಗೇಹಳ್ಳಿ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿಯಲ್ಲಿ ಈತನ ಹೆಸರಿದೆ.

ತರಬೇತಿ ನೀಡಿದ ಪೇದೆ

ಸುಲಿಗೆಯ ಈ ತಂಡಕ್ಕೆ ಹೆಣ್ಣೂರು ಟ್ರಾಫಿಕ್ ಪೊಲೀಸ್ ಠಾಣೆಯ ಇಲಿಯಾಜ್ ಮನೆಯಲ್ಲಿ ತರಬೇತಿ ನೀಡುತ್ತಿದ್ದ. ಕಳ್ಳತನದ ಯೋಜನೆಗಳನ್ನು ರೂಪಿಸಿ ಕಳುಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಿ, ಇಲಾಖೆ ಗೌರವ ಹೆಚ್ಚಿಸಬೇಕಾಗಿದ್ದ ಪೇದೆಯೇ ರೌಡಿಶೀಟರ್ ಹಾಗೂ ಕಳ್ಳರೊಂದಿಗೆ ಸೇರಿ ದುಷ್ಕೃತ್ಯ ನಡೆಸಲು ತರಬೇತಿ ನೀಡುತ್ತಿದ್ದ ಎಂಬ ವಿಚಾರವು ಪೊಲೀಸ್ ವಲಯವನ್ನು ಬೆಚ್ಚಿ ಬೀಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net