

ಅರಕಲಗೂಡು: ಕರೊನಾ ವೈರಸ್ ಮಾರಿ ತಡೆಗಟ್ಟುವ ಸಲುವಾಗಿ ಹೇರಿರುವ ನಿಷೇಧಾಜ್ಞೆ ಜಾರಿ ನಡುವೆ ತಾಲೂಕಿನಲ್ಲಿ ಮಂಗಳವಾರ ಯುಗಾದಿ ಹಬ್ಬದ ಸಾಮಾನುಗಳನ್ನು ಖರೀದಿಸಲು ಮುಖಕ್ಕೆ ಮಾಸ್ಕ್ ಧರಿಸದೆ ಮಾರುಕಟ್ಟೆ ಪ್ರದೇಶಗಳಿಗೆ ಮುಗಿಬೀಳುತ್ತಿದ್ದ ವ್ಯಾಪಾರಸ್ಥರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಪಟ್ಟಣದಲ್ಲಿ ಸರ್ಕಾರದ ಆದೇಶ ಲೆಕ್ಕಿಸದೆ ಬೆಳಗ್ಗಿನಿಂದಲೇ ಜನದಟ್ಟಣೆ ವಾಹನ ದಟ್ಟಣೆ ಎಂದಿನಂತಿತ್ತು. ಅಂಗಡಿ-ಮುಂಗಟ್ಟುಗಳ ವ್ಯಾಪಾರಿಗಳು ಬಾಗಿಲು ತೆರೆದು ವಹಿವಾಟು ನಡೆಸಲು ಮುಂದಾದರು. ದಿನವಹಿ ಸಂತೆ ಮಾರುಕಟ್ಟೆಯಲ್ಲಿ ತರಕಾರಿ, ಸೊಪ್ಪು, ಹಬ್ಬದ ವಸ್ತುಗಳ ವ್ಯಾಪಾರ ಬಿರುಸಾಗಿ ಸಾಗಿತ್ತು. ನಿಷೇಧಾಜ್ಞೆ ಜಾರಿ ಎಂಬುದನ್ನು ಅರಿಯದವರಂತೆ ಅಪಾರ ಸಂಖ್ಯೆಯಲ್ಲಿ ಜನರು ಗುಂಪುಗೂಡಿ ವ್ಯಾಪಾರದಲ್ಲಿ ತೊಡಗಿದ್ದನ್ನು ಕಂಡ ಪೊಲೀಸರು ವ್ಯಾಪಾರಸ್ಥರನ್ನು ಎತ್ತಂಗಡಿ ಮಾಡಿಸಿ ಜನರನ್ನು ಚದುರಿಸಿದರು.
ಪೇಟೆ, ಕೋಟೆ ಪ್ರದೇಶ ವ್ಯಾಪ್ತಿಯಲ್ಲಿನ ವ್ಯಾಪಾರಿ ಅಂಗಡಿಗಳ ಬಾಗಿಲು ಮುಚ್ಚಿಸಿದ ಪೊಲೀಸರು ಗುಂಪುಗೂಡದಂತೆ ಜಾಗೃತಿ ವಹಿಸಬೇಕು ಎಂದು ಜನತೆಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಕರೊನಾ ವೈರಸ್ ಹರಡದಂತೆ ಸಹಕರಿಸುವಂತೆ ಅರಿವು ಮೂಡಿಸಿದರು.
ತಾಲೂಕಿನ ಪ್ರಮುಖ ಹೋಬಳಿ ಕೇಂದ್ರಗಳಾದ ಕೊಣನೂರು ಮತ್ತು ರಾಮನಾಥಪುರದಲ್ಲಿ ಪೊಲೀಸರು ಬೆಳಗಿನ ಸಮಯವೇ ವ್ಯಾಪಾರಿ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿಸಿ ಜನಸಂದಣಿ ಸೇರದಂತೆ ನಿಗಾ ವಹಿಸಿ ಗಸ್ತು ನಡೆಸಿದರು.
ತಾಲೂಕಿನ ಪ್ರಮುಖ ವಾಣಿಜ್ಯ ಪಟ್ಟಣವಾದ ಕೇರಳಾಪುರದಲ್ಲಿ ವಾರದ ಸಂತೆ ದಿನವಾದ ಮಂಗಳವಾರ ಜನಜಾತ್ರೆಯೇ ನೆರೆದಿತ್ತು. ವಾರದ ಸಂತೆ ಎತ್ತಂಗಡಿ ಮಾಡಿಸಲು ಪೊಲೀಸರು ಮುಂದಾದ ಹಿನ್ನೆಲೆಯಲ್ಲಿ ಸಂತೆ ಅಸ್ತವ್ಯಸ್ತವಾಗಿ ವ್ಯಾಪಾರಸ್ಥರು ಹೈರಾಣಾದರು.
ಕೇರಳಾಪುರ ಮಾಳದ ಸಂತೆಯಲ್ಲಿ ವ್ಯಾಪಾರಕ್ಕಾಗಿ ಸುತ್ತಲಿನ ಹಳ್ಳಿಗಳ ಸಾವಿರಾರು ಜನರು ಮುಗಿಬೀಳುತ್ತಿದ್ದರು. ಅಂಗಡಿ ಮುಂಗಟ್ಟುಗಳ ಮುಂದೆ ಜನಜಂಗುಳಿ ಸೇರಿತ್ತು. ದ್ವಿಚಕ್ರ ವಾಹನ ಸಂಚಾರದ ನಡುವೆ ಜನರಿಂದ ಗಿಜಿಗುಡುತ್ತಿದ್ದ ದಿನವಹಿ ಹೂವಿನ ಮಾರುಕಟ್ಟೆ ಪ್ರದೇಶ ಮತ್ತು ಗಾಂಧಿಚೌಕದ ಮುಖ್ಯ ರಸ್ತೆಬದಿ ತರಕಾರಿಗಳ ರಾಶಿ ಹಾಕಿ ವ್ಯಾಪಾರ ಶುರು ಮಾಡಿದರು.
ಮಧ್ಯಾಹ್ನದ ಸುಡುಬಿಸಿಲನ್ನು ಲೆಕ್ಕಿಸದೆ ತಂಡೋಪತಂಡವಾಗಿ ಬರಲಾರಂಭಿಸಿದ ಜನರು ನೂಕುನುಗ್ಗಲಿನಲ್ಲಿ ಹಬ್ಬದ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು. ಸ್ಥಳಕ್ಕೆ ಧಾವಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಕೊಣನೂರು ಪೊಲೀಸರು ವ್ಯಾಪಾಸ್ಥರನ್ನು ಎತ್ತಂಗಡಿ ಮಾಡಿಸಿ ಗುಂಪುಗೂಡಿದ ಜನರನ್ನು ಚದುರಿಸಲು ಹರಸಾಹಸ ಪಡಬೇಕಾಯಿತು. ಕಡೆಗೆ ಪೊಲೀಸರು ಆಟೋದಲ್ಲಿ ಮೈಕ್ ಮೂಲಕ ಪ್ರಚಾರ ಮಾಡಿ ಸಂತೆ ವ್ಯಾಪಾರವನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾದರು.