ಪೊಲೀಸರು ಸಾಮಾಜಿಕ ವೈದ್ಯರು

h7-Police Sports 2
Published on

ಹುಬ್ಬಳ್ಳಿ: ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾದಾಗ ವೈದ್ಯರು ಹೇಗೆ ಚಿಕಿತ್ಸೆ ಕೊಡುತ್ತಾರೋ ಹಾಗೆಯೇ ಅಪಘಾತ, ಗಲಭೆ, ಪ್ರಕೃತಿ ವಿಕೋಪ, ಅಪರಾಧಗಳಂಥ ತುರ್ತು ಸಂದರ್ಭದಲ್ಲಿ ಪೊಲೀಸರ ಚಿಕಿತ್ಸೆ ಅತ್ಯಗತ್ಯ. ಹಾಗಾಗಿ, ಪೊಲೀಸರು ಸಾಮಾಜಿಕ ವೈದ್ಯರಿದ್ದಂತೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅಭಿಪ್ರಾಯಪಟ್ಟರು.

ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಗೋಕುಲ ರಸ್ತೆಯ ಹೊಸ ಸಿಎಆರ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟ- 2020ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ರೀಡಾಕೂಟದಲ್ಲಿ ಸ್ಪೋರ್ಟ್ಸ್ ಮ್ಯಾನ್ ಸ್ಪಿರಿಟ್ ಹೇಗೆ ಇರುತ್ತದೋ, ಅದೇ ರೀತಿ ಕರ್ತವ್ಯದ ವೇಳೆ ಪೊಲೀಸ್ ಮ್ಯಾನ್ ಸ್ಪಿರಿಟ್ ಇರಬೇಕು. ಜನ ಪೊಲೀಸರಿಂದ ರಕ್ಷಣೆ ಬಯಸುತ್ತಾರೆ. ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

ಲಾಭೂರಾಮ ಹಾಗೂ ನಾನು ಚಿತ್ರದುರ್ಗದಲ್ಲಿ ನಾಲ್ಕು ವರ್ಷ ಒಟ್ಟಿಗೆ ಕೆಲಸ ಮಾಡಿದ್ದೆವು. ನನಗೆ ಬೇರೆಡೆ ವರ್ಗಾವಣೆಯಾದಾಗ ಪತ್ರಿಕೆಯಲ್ಲಿ ‘ಅಪರೂಪದ ಜೋಡಿಗೆ ವಿದಾಯ’ ಎಂದು ಬರೆದಿದ್ದರು ಎಂದು ಬಿಸ್ವಾಸ್ ನೆನಪಿಸಿಕೊಂಡರು. ಲಾಭೂರಾಮ ನಾನು ಕಂಡ ಬೆಸ್ಟ್ ಐಪಿಎಸ್ ಅಧಿಕಾರಿ ಎಂದರು.

ಪೊಲೀಸ್ ಆಯುಕ್ತ ಲಾಭೂರಾಮ, ಡಿಸಿಪಿಗಳಾದ ಕೆ. ರಾಮರಾಜನ್, ಆರ್.ಬಿ. ಬಸರಗಿ, ಎಸ್.ವಿ. ಯಾದವ, ಎಸಿಪಿಗಳಾದ ಎಂ.ಎಸ್. ಹೊಸಮನಿ, ವಿನೋದ ಮುಕ್ತೇದಾರ, ಜಿ. ಅನುಷಾ, ಇನ್​ಸ್ಪೆಕ್ಟರ್​ಗಳಾದ ಜಗದೀಶ ಹಂಚಿನಾಳ, ಎನ್.ಸಿ. ಕಾಡದೇವರ, ಅಧಿಕಾರಿ, ಸಿಬ್ಬಂದಿ, ಕುಟುಂಬದವರು, ಇತರರು ಪಾಲ್ಗೊಂಡಿದ್ದರು.

ಪಾಲಿಕೆಯಿಂದ ಮೈದಾನ ಅಭಿವೃದ್ಧಿ

ಮಹಾನಗರ ಪಾಲಿಕೆ ವತಿಯಿಂದ ಮುಂದಿನ ವರ್ಷದೊಳಗೆ ಗೋಕುಲ ರಸ್ತೆಯ ಹೊಸ ಸಿಎಆರ್ ಮೈದಾನವನ್ನು ಅಭಿವೃದ್ಧಿಪಡಿಸಲಾಗುವುದು. ಆ ಮೂಲಕ ಪೊಲೀಸರ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡಲಾಗುವುದು ಎಂದು ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಭರವಸೆ ನೀಡಿದರು.

ತಪ್ಪಲಿಲ್ಲ ಕಮಿಷನರ್ ಗುರಿ: ಅಧಿಕಾರಿಗಳ ಪಿಸ್ತೂಲ್ ಫೈರಿಂಗ್ ವಿಭಾಗದಲ್ಲಿ ಹು-ಧಾ ಪೊಲೀಸ್ ಆಯುಕ್ತ ಲಾಭೂರಾಮ ನಿರ್ದಿಷ್ಟ ಗುರಿ ತಲುಪುವ ಮೂಲಕ ಪ್ರಥಮ ಸ್ಥಾನ ಪಡೆದರು. ಸಿಎಆರ್ ಡಿಸಿಪಿ ಎಸ್.ವಿ. ಯಾದವ ದ್ವಿತೀಯ ಹಾಗೂ ವೈರ್​ಲೆಸ್ ಎಸಿಪಿ ಮಂಜುನಾಥ ಬಳಗಾನೂರ ತೃತೀಯ ಸ್ಥಾನ ಪಡೆದುಕೊಂಡರು.

ವೀರಾಗ್ರಣಿಗಳು: ಸಿಎಆರ್ ತಂಡದ ಈರಣ್ಣ ದೇಸಾಯಿ ಸತತವಾಗಿ 11ನೇ ಬಾರಿಗೆ ಪುರುಷರ ವೈಯಕ್ತಿಕ ವಿಭಾಗದಲ್ಲಿ ಸಮಗ್ರ ವೀರಾಗ್ರಣಿ ಪಡೆದರು. ಮಹಿಳೆಯರ ವಿಭಾಗದಲ್ಲಿ ಬೆಂಡಿಗೇರಿ ಠಾಣೆಯ ಪಿ.ಎಲ್. ರಾಠೋಡ ಸಮಗ್ರ ವೀರಾಗ್ರಣಿ ಪಡೆದರು. ಹು-ಧಾ ಸಿಎಆರ್ ಟೀಮ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಮಾಧ್ಯಮ ಮತ್ತು ಪೊಲೀಸ್ ಸ್ನೇಹಪೂರ್ವಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪೊಲೀಸ್ ತಂಡ ವಿಜಯಶಾಲಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net