ಹಾಸನ ಸಾಹಿತ್ಯೋತ್ಸವದಲ್ಲಿ ಎಲ್ಲರ ಗಮನ ಸೆಳೆದ ಕವಿತಾ ಸಮಯ

07_HSN_05
Published on

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ಹಾಸನ ಸಾಹಿತ್ಯೋತ್ಸವ ಎರಡನೇ ದಿನದ ಕವಿತಾ ಸಮಯ ಗೋಷ್ಠಿ-7 ಸಾಹಿತ್ಯಾಸಕ್ತರು ಹಾಗೂ ಸಂಗೀತ ಪ್ರಿಯರ ಮನಸೂರೆಗೊಳಿಸಿತು. ಮದ್ರಾಸ್ ವಿವಿ ಕನ್ನಡ ವಿಭಾಗ ಮುಖ್ಯಸ್ಥೆ ತಮಿಳು ಸೆಲ್ವಿ ಹಾಗೂ ಕಲಾವಿದೆ ಮಾನಸಿ ಸುಧೀರ್ ಅವರು ಭಾವಗೀತೆಗಳ ಗಾಯನದ ಮೂಲಕ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದರು.

ಮಾನಸಿ ಸುಧೀರ್ ಅವರ ಹಾಡಿಗೆ ಜನರು ಅಕ್ಷರಶಃ ತಲೆದೂಗಿದರು. ಏಕಪಾತ್ರಾಭಿನಯ ಜತೆಗೆ ಹಾಡುಗಳು ಚಪ್ಪಾಳೆ ಗಿಟ್ಟಿಸಿದವು. ನೆರೆದಿದ್ದ ಪ್ರತಿಯೊಬ್ಬರೂ ಹಾಡುಗಳಿಗೆ ಕಿವಿಯಾದರು, ಕೆಲವರು ದನಿಯಾದರು. ಎಲ್ಲರೂ ತದೇಕ ಚಿತ್ತರಾಗಿ ಕುಳಿತು ಆಲಿಸುವಂತೆ ಮಾಡಿದ್ದು, ಮಾನಸಿ ಸುಧೀರ್ ಅವರ ಕಲಾವಂತಿಕೆಗೆ ಕೈಗನ್ನಡಿ ಹಿಡಿದಿತ್ತು.

ಎಚ್.ಎಸ್.ವೆಂಕಟೇಶ್‌ಮೂರ್ತಿ ಅವರ ತಾಯಿ ಗುಬ್ಬಿ ಮರಿ ಗುಬ್ಬಿ ಸಂವಾದ, ಕೆ.ವಿ.ತಿರುಮಲೇಶ್ ಅವರ ಎಲ್ಲಿಗೆ ಹೋಗೋಣ-ಏನನು ಮಾಡೋಣ, ಎಂ.ಎಸ್.ಲಕ್ಷ್ಮಿನಾರಾಯಣ ಭಟ್ಟರ ತೆಂಗಿನ ಮರವೇ ಆಗ್ತಿಯಾ, ಕೆ.ಎಸ್.ನರಸಿಂಹಸ್ವಾಮಿ ಅವರ ಕಳೆದ ವರ್ಷ ಚೈತ್ರದಲ್ಲಿ ಹಾಡುಗಳನ್ನು ನೃತ್ಯದ ಮೂಲಕ ಪ್ರಸ್ತುತ ಪಡಿಸಿದ್ದು ಎಲ್ಲರಲ್ಲೂ ಖುಷಿ ತರಿಸಿತು.

ಬಿ.ಆರ್.ಲಕ್ಷ್ಮಣರಾವ್ ರಚಿತ, ಗುರುರಾಜ ಮಾರ್ಪಳ್ಳಿ ರಾಗ ಸಂಯೋಜನೆ ಮಾಡಿರುವ ಏನೀ ಅದ್ಭುತವೇ ಹಾಡು ಹಾಡಿದ ಮಾನಸಿ ಸುಧೀರ್ ಗಾಯನ ಎಲ್ಲರನ್ನೂ ನಿಬ್ಬೆರಗಾಗಿಸಿತು. ತಮಿಳು ಸೆಲ್ವಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಓದುವಿಕೆ, ಓದುವ ರೀತಿ ಕಡಿಮೆ ಆಗುತ್ತಿದೆ. ಗದ್ಯ ಓದುವುದು ಕಡಿಮೆ, ಅದರಲ್ಲೂ ಪ್ರಾಚೀನ ಕನ್ನಡ ಓದುವುದು ಕಡಿಮೆ. ಪ್ರಸ್ತುತ ಯುವ ಜನಾಂಗ ಏಕೆ ಓದಿಗೆ ನಿರಾಸಕ್ತಿ ತೋರುತ್ತಿದೆ ಎಂಬುದನ್ನು ಅರಿತು ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ಆಗಬೇಕಿದೆ ಎಂದರು.

ಕೆ.ಎಸ್. ನಿಸಾರ್ ಅಹ್ಮದ್ ಅವರ ಅಮ್ಮ ಆಚಾರ ನಾನು ಕವಿತೆ ವಾಚನ ಮಾಡಿದರು. ಕೆ.ವಿ.ತಿರುಮಲೇಶ್ ಅವರ ಇದ್ದಿಲು ಅಂಗಡಿ, ದ.ರಾ.ಬೇಂದ್ರೆ ಅವರ ಕುರುಡು ಕಾಂಚಾಣ ಕುಣಿಯುತಲಿತ್ತು, ನೇಮಿಚಂದ್ರ ಅವರು ಕವಿಗಳ ಬಗ್ಗೆ ಹೇಳ್ತಾನೆ. ಕವಿಗಳು ಹೇಗೆ ಬೇಕಾದರೂ ಬರೆದು ನಮಗೆ ಅರ್ಥ ಮಾಡಿಸುತ್ತಾರೆ ಎನ್ನುತ್ತಾರೆ. ಹಳಗನ್ನಡ ಅರ್ಥವಾಗುವುದಿಲ್ಲ ಎನ್ನುತ್ತೇವೆ. ಸ್ವಲ್ಪ ಸೂಕ್ಷ್ಮವಾಗಿ ಓದಿದರೆ ಅದು ಸುಲಭವಾಗಿ ಅರ್ಥವಾಗುತ್ತದೆ ಎಂದರು. ಮುಂದುವರಿದು ರನ್ನನ ಗದಾಯುದ್ಧ, ಕುಮಾರವ್ಯಾಸರ ಪದ್ಯವನ್ನು ವಾಚಿಸಿದರು.

ಗೋಷ್ಠಿ ನಿರ್ವಹಣೆ ಮಾಡಿದ ಡಾ. ದೊರೇಶ್ ಬಿಳಿಕೆರೆ ಮಾತನಾಡಿ, ಕಾವ್ಯ ಕಾಲಘಟ್ಟಕ್ಕೆ ತಕ್ಕಂತೆ ಹೇಗೆ ಬದಲಾಗುತ್ತದೆ ಎಂಬುದನ್ನು ಅರಿಯಬೇಕಾಗುತ್ತದೆ. ಕಾವ್ಯವನ್ನು ಶಕ್ತಿಗೊಳಿಸಿದ ಬಗೆಯನ್ನು ನೋಡಿದರೆ ಈ ಗೋಷ್ಟಿ ಸಾರ್ಥಕವಾಗಿದೆ. ಕಾವ್ಯವನ್ನು ಹೇಗೆ ಎದೆಯಾಳಕ್ಕೆ ಇಳಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣಗಳ ಕಾಲದಲ್ಲಿ ಅದನ್ನು ಈ ರೀತಿಯು ಉಪಯೋಗಿಸಬಹುದು ಎಂಬುದಕ್ಕೆ ಮಾನಸಿ ಸುಧೀರ್ ಸಾಕ್ಷಿಯಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net