ಕವಿ ಸಮಾಜದ ಪರ ಸಕರಾತ್ಮಕ ಚಿಂತನೆ ಮಾಡಬೇಕು; ಅನಿತಾ ಪೂವಯ್ಯ

MDK02
Published on

ಮಡಿಕೇರಿ: ಮನದಾಳದ ತುಡಿತಗಳು ಪದಗಳಾಗಿ ಹೊರಬೇಕಾದರೆ ಕವಿ ಸಮಾಜದ ಪರ ಸಕರಾತ್ಮಕ ಚಿಂತನೆ ಮಾಡಬೇಕು ಎಂದು ನಗರಸಭೆ ಅಧ್ಯಕ್ಷೆ ಹಾಗೂ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಹೇಳಿದರು.


ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಿದ್ದ ಬಹುಭಾಷ ಕವಿಗೋಷ್ಠಿಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ವಿಷಯಗಳಿಗೆ ವಿಶಾಲ ಅರ್ಥ ನೀಡಬೇಕು. ಕವಿಗಳು ಕಲಿಕೆಗೆ ಒತ್ತು ನೀಡಬೇಕು. ಓದಿನಿಂದ ಮಾತ್ರ ಉತ್ತಮ ಕವಿಯಾಗಲು ಸಾಧ್ಯ. ಮಕ್ಕಳಿಗೂ ಓದುವ ಅಭಿರುಚಿ ಬೆಳಸಬೇಕು ಎಂದು ಕರೆ ನೀಡಿದ ಅವರು, ಮನದಾಳದ ತುಡಿತಗಳು ಪದಗಳಾಗಿ ಹೊರಬೇಕಾದರೆ ಕವಿ ಸಮಾಜದ ಪರ ಸಕರಾತ್ಮಕ ಚಿಂತನೆ ಮಾಡಬೇಕು ಎಂದರು. ಬಳಿಕ ತಂದೆಯ ಬಗ್ಗೆ ಅವರ ಮಗಳು ಬರೆದ ಕವನವನ್ನು ವೇದಿಕೆಯಲ್ಲಿ ಅನಿತಾ ವಾಚಿಸಿದರು.


ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಕಾವ್ಯ ಶರಧಿ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿ, ಕವನಗಳು ವಿವಿಧ ಆಯಾಮ ಪಡೆದುಕೊಳ್ಳುತ್ತದೆ. ಓದಿದರೆ ಕವನ ಅದಕ್ಕೆ ರಾಗ ಸಂಯೋಜಿಸಿದ ಹಾಡಾಗಿ ಪರಿವರ್ತನೆಯಾಗುತ್ತದೆ. ಕವಿತೆಗಳು ಪ್ರಾಸಬದ್ಧದ ಜತೆಗೆ ಚಿಂತನೆಯಲ್ಲಿ ಕೂಡಿರಬೇಕು. ಯಾವುದೇ ಪರ-ವಿರೋಧವಿಲ್ಲದೆ ವಿಷಯವನ್ನು ಮುಟ್ಟಿಸುವ ಕೆಲಸ ಕವಿಯ ಕರ್ತವ್ಯ ಎಂದು ಹೇಳಿದರು.


ಸಭೆಯಲ್ಲಿ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ, ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಕವಿಗೋಷ್ಠಿ ಸಮಿತಿ ಅಧ್ಯಕ್ಷ ಕುಡೆಕಲ್ಲು ಸಂತೋಷ್, ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್.ರಮೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಜಿ ಶ್ವೇತಾ ಪ್ರಶಾಂತ್, ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯೆ ಸಬಿತಾ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೇಕಲ್ಲು ಕುಶಾಲಪ್ಪ, ಜಾನಪದ ಪರಿಷತ್ತು ಮಡಿಕೇರಿ ತಾಲೂಕು ಅಧ್ಯಕ್ಷ ಎಚ್.ಟಿ.ಅನಿಲ್, ಮಡಿಕೇರಿ ತಾಲೂಕು ಕ.ಸಾ.ಪ. ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ, ಕ.ಸಾ.ಪ. ಮಾಜಿ ಅಧ್ಯಕ್ಷ ಲೋಕೇಶ್ ಸಾಗರ್, ಪ್ರಮುಖರಾದ ಎಂ.ಪಿ.ರವಿ, ಚೋಕಿರ ಅನಿತಾ, ಜಯಲಕ್ಷ್ಮಿ, ನಾಸಿರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net