

ಅಂಕೋಲಾ: ಡಿ. ದೇವರಾಜ ಅರಸು ಅವರು ಸಾಮಾಜಿಕ ನ್ಯಾಯ ಒದಗಿಸಲು ಬಗರ ಹುಕುಂ ಸಾಗುವಳಿ ಪದ್ಧತಿ ಜಾರಿಗೆ ತಂದಿರುವುದು ಐತಿಹಾಸಿಕ ಮತ್ತು ಕ್ರಾಂತಿಕಾರಿ ನಿರ್ಣಯ. ಇದರಿಂದ ದೀನ ದಲಿತರು, ಬಡವರು ಮತ್ತು ರೈತರಿಗೆ ಅನುಕೂಲವಾಗಿದೆ ಎಂದು ತಹಸೀಲ್ದಾರ್ ಅಶೋಕ ಎನ್. ಭಟ್ ಹೇಳಿದರು.
ತಾಲೂಕಾಡಳಿತ, ತಾಪಂ., ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಪಟ್ಟಣದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು.
ಪದ್ಮಶ್ರೀ ತುಳಸಿ ಗೌಡ ಮಾತನಾಡಿ, ನಾನು ಚಿಕ್ಕಂದಿರುವಾಗಲೇ ಗಿಡ-ಮರಗಳನ್ನು ನೆಟ್ಟಿ ರಕ್ಷಣೆ ಮಾಡಿದ್ದೇನೆ. ಇದನ್ನು ಗುರುತಿಸಿ ಅರಣ್ಯ ಇಲಾಖೆಯವರು ನನಗೆ ಪ್ರಶಸ್ತಿ ಲಭ್ಯತೆಗೆ ಕಾರಣರಾದರು. ವಿದ್ಯಾರ್ಥಿಗಳು ಸಹ ತಮ್ಮ ಜನ್ಮದಿನದಂದು ಗಿಡ ನೆಟ್ಟು ಅದರ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಗೂ ಮುಂದಾಗಬೇಕು ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ವಸತಿ ನಿಲಯದ ವಿದ್ಯಾರ್ಥಿಗಳಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 84 ಅಂಕ ಪಡೆದ ಹರೀಶ ಪಿ. ಪಟಗಾರ ಮತು ಪಿಯುಸಿಯಲ್ಲಿ ಶೇ. 95 ಅಂಕ ಪಡೆದ ಸಹನಾ ಸತೀಶ ನಾಯ್ಕ ಹಾಗೂ ಪದ್ಮಶ್ರೀ ತುಳಸಿ ಗೌಡ, ನಾಟಿ ವೈದ್ಯ ಹನುಮಂತ ಗೌಡ ಅವರನ್ನು ಸನ್ಮಾನಿಸಿದರು. ಕೆಎಲ್ಇ ಮಹಾವಿದ್ಯಾಲಯದ ಉಪನ್ಯಾಸಕ ಮಂಜುನಾಥ ಇಟಗಿ ಅವರು ಡಿ. ದೇವರಾಜ ಅರಸು ಅವರ ಕುರಿತು ಉಪನ್ಯಾಸ ನೀಡಿದರು. ತಾಪಂ ಯೋಜನಾಧಿಕಾರಿ ನಾಗಭೂಷಣ ಕಲ್ಮನೆ, ಬಿಇಒ ಮಂಗಳಲಕ್ಷ್ಮಿ ಪಾಟೀಲ, ನಾಟಿ ವೈದ್ಯ ಹನುಮಂತ ಗೌಡ, ಹಿರಿಯ ನಾಗರಿಕ ಹೊನ್ನಪ್ಪ ನಾಯಕ ಮೊಗಟಾ ಮಾತನಾಡಿದರು. ಸಿಡಿಪಿಒ ಸವಿತಾ ಶಾಸ್ತ್ರೀಮಠ, ಪುರಸಭೆ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ, ಇತರರು ಉಪಸ್ಥಿತರಿದ್ದರು.
ಬಿಸಿಎಂ ಪ್ರಭಾರ ತಾಲೂಕು ಕಲ್ಯಾಣಾಧಿಕಾರಿ ಸೀತಾ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಲಾ ಪಟಗಾರ ಪ್ರಾರ್ಥಿಸಿದರು, ಚಂದನಾ ನಾಯ್ಕ ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು. ಬಿಸಿಎಂ ಗಂಡು ಮಕ್ಕಳ ವಸತಿ ನಿಲಯದ ಮೇಲ್ವಿಚಾರಕ ಶಿವಾನಂದ ನಾಯ್ಕ ಹಾಗೂ ಭಾರತಿ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು.