

ಬೇಲೂರು: ಮಕ್ಕಳಲ್ಲಿರುವ ಪ್ರತಿಭೆ ಹೊರಹೊಮ್ಮಿಸಲು ವೇದಿಕೆ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಇದರ ಸದುಪಯೋಗ ಪಡೆದು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್ ಹೇಳಿದರು.
ಪಟ್ಟಣದ ಪೂರ್ಣ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಸಾಕ್ಷರತಾ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಕಸಬಾ ಎ ವಲಯ ಮಟ್ಟದ ಪ್ರೌಢಶಾಲಾ ವಿಭಾಗ ಮಟ್ಟದ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
2023-24ನೇ ಶೈಕ್ಷಣಿಕ ವರ್ಷದಲ್ಲಿ ಪ್ರತಿಭಾ ಕಾರಂಜಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೊಜಿಸುವ ಮೂಲಕ ಮಕ್ಕಳಿಗೆ ಬೌದ್ಧಿಕ ಹಾಗೂ ಮಾನಸಿಕವಾಗಿ ಉತ್ತೇಜಿಸುವ ಕೆಲಸವನ್ನು ಇಲಾಖೆಯಿಂದ ಮಾಡಲಾಗುತ್ತಿದೆ. ಕೇವಲ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮಾತ್ರ ನೀಡಿದರೆ ಸಾಲದು ಅವರಲ್ಲಿ ಇರುವಂತಹ ಪ್ರತಿಭೆಯನ್ನು ಶಾಲಾ ಶಿಕ್ಷಕರು ಗಮನಿಸಿ ಪ್ರೋತ್ಸಾಹಿಸುವ ಕೆಲಸ ಮಾಡಿದಾಗ ಮಾತ್ರ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ಶಿಕ್ಷಣ ಸಂಯೋಜಕ ರವಿಕುಮಾರ್ ಮಾತನಾಡಿ, ನಮ್ಮ ನಾಡಿನ ಸಂಸ್ಕೃತಿ ಬಿಂಬಿಸುವ ಕೆಲಸ ಈ ಕಲೋತ್ಸವದಲ್ಲಿ ಆಗಲಿದೆ. ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಗಳು ಮಕ್ಕಳ ವಿದ್ಯೆಯ ಜತೆಗೆ ಅಗತ್ಯವಾಗಿದೆ. ಎಲ್ಲ ಮಕ್ಕಳಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದು ಸಧನೆ ಮಾಡುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಪೂರ್ಣ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ ಪ್ರಶಾಂತ್ ಮಾತನಾಡಿ, ಶಿಕ್ಷಣವನ್ನು ಕೇವಲ ಪಠ್ಯದಲ್ಲಿರುವುದನ್ನು ಮಾತ್ರ ಕಲಿಸುವುದಲ್ಲ. ಶಿಕ್ಷಣದೊಂದಿಗೆ ಮಕ್ಕಳಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ವಿದ್ಯೆಯೊಂದಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಧೈರ್ಯ ತಂದುಕೊಳ್ಳಬೇಕು. ಉತ್ತಮ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸಿದರೆ ವಿಶ್ವ ಮಟ್ಟದಲ್ಲಿ ಹೆಸರು ಪಡೆಯಲು ಸಾಧ್ಯ ಎಂದರು.
ಶಿಕ್ಷಣ ಸಂಯೋಜಕರಾದ ಮಂಜುನಾಥ್, ಶಿವಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೇಮಂತ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ತಿಮ್ಮೇಗೌಡ, ಬಿಆರ್‌ಪಿ ಕುಮಾರ್, ಸಿಆರ್‌ಪಿ ವಿಜಯ, ಪೂರ್ಣ ಪ್ರಜ್ಞಾ ವಿದ್ಯಾ ಸಂಸ್ಥೆ ಜಂಟಿ ಕಾರ್ಯದರ್ಶಿ ಅನಂತರಾಮು, ಮುಖ್ಯಶಿಕ್ಷಕಿ ಸುನೀತಾಕುಮಾರಿ, ಶಿಕ್ಷಕ ರಘು ಇದ್ದರು.
ಬೇಲೂರು ಪಟ್ಟಣದ ಪೂರ್ಣ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಕಲೋತ್ಸವ ಕಾರ್ಯಕ್ರಮದಲ್ಲಿ ವಿವಿಧ ವೇಷಭೂಷಣದೊಂದಿಗೆ ಭಾಗವಹಿಸಿದ್ದ ವಿದ್ಯಾರ್ಥಿಗಳೊಂದಿಗೆ ಗಣ್ಯರು. ಕೆ.ಪಿ.ನಾರಾಯಣ್, ಪ್ರಶಾಂತ್, ಮಂಜುನಾಥ್, ಶಿವಪ್ಪ, ಹೇಮಂತ್, ತಿಮ್ಮೇಗೌಡ, ಕುಮಾರ್, ವಿಜಯ, ಅನಂತರಾಮು ಇದ್ದರು.