

ನವೀನ್ ಶೆಟ್ಟಿ ಕೆರಾಡಿ ಆನೇಕಲ್
ತಮಿಳುನಾಡಿನಿಂದ ಬರುವ ಟಿಪ್ಪರ್ ಲಾರಿಗಳ ಹಾವಳಿಗೆ ತಾಲೂಕಿನ ಜನ ತತ್ತರಿಸಿದ್ದಾರೆ. ಆನೇಕಲ್ ಮಾರ್ಗವಾಗಿ ಜಲ್ಲಿ, ಎಂ ಸ್ಯಾಂಡ್, ಪಿ ಸ್ಯಾಂಡ್ ಹಾಗೂ ಮಣ್ಣು ತುಂಬಿಕೊಂಡು ಬರುವ ಟಿಪ್ಪರ್ ಲಾರಿಗಳು ನಿಯಮ ಉಲ್ಲಂಘಿಸಿ ಮನಸೋ ಇಚ್ಛೆ ಲೋಡ್ ಹಾಕಿಕೊಂಡು ಬರುತ್ತಿದ್ದು, ಸಣ್ಣಪುಟ್ಟ ವಾಹನಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಕಿರಿಕಿರಿ ಉಂಟಾಗಿದೆ. ಓವರ್ ಲೋಡ್ ಟಿಪ್ಪರ್ಗಳ ಓಡಾಟದಿಂದ ರಸ್ತೆಯಲ್ಲಿ ಧೂಳು ಹಾಗೂ ಮಣ್ಣು ಗಾಳಿಗೆ ತೂರಿಕೊಂಡು ಬಂದು ದ್ವಿಚಕ್ರ ವಾಹನದಲ್ಲಿ ಹೋಗುವವರ ಕಣ್ಣುಗಳಿಗೆ ಬಿದ್ದು ಅಪಘಾತಗಳಾಗುವ ಸಂಭವವಿದೆ. ಹೊಸೂರಿನಿಂದ ಸಮಂದೂರು ಮಾರ್ಗವಾಗಿ ಆನೇಕಲ್ ಪಟ್ಟಣಕ್ಕೆ ಬರುವ ಟಿಪ್ಪರ್ ಲಾರಿಗಳು ಪಟ್ಟಣದಲ್ಲಿ ಅತಿ ಹೆಚ್ಚು ಭಾರ ಹೇರಿಕೊಂಡು ಬರುತ್ತಿದ್ದು, ಇದರಿಂದ ಪಟ್ಟಣದ ರಸ್ತೆ ಸಂಪೂರ್ಣವಾಗಿ ಕಿತ್ತು ಗುಂಡಿಗಳು ಬಿದ್ದಿವೆ. ಟಿಪ್ಪರ್ಗಳು ಪಟ್ಟಣದಲ್ಲಿಯೂ ಅತಿ ವೇಗವಾಗಿ ಸಂಚಾರ ಮಾಡುತ್ತಿದ್ದು, ದ್ವಿಚಕ್ರ ವಾಹನ ಸವಾರರು ಟಿಪ್ಪರ್ ಲಾರಿಗಳು ಬಂದಾಗ ಭಯದಿಂದ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆನೇಕಲ್ ಪಟ್ಟಣದಲ್ಲಿ ಮೊದಲೇ ಪಾದಚಾರಿ ಮಾರ್ಗ ಇಲ್ಲ, ಜನ ರಸ್ತೆಯಲ್ಲೇ ಓಡಾಡಬೇಕು. ಹೀಗಿರುವಾಗ ವೇಗವಾಗಿ ಬರುವ ಟಿಪ್ಪರ್ ಲಾರಿಗಳ ಹಾವಳಿಗೆ ಕಳೆದ ನಾಲ್ಕೆದು ತಿಂಗಳಲ್ಲಿ ಐದಾರು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಆರ್ಟಿಒ ಪೊಲೀಸರ ಮೌನ : ಹೊಸೂರು ಮಾರ್ಗವಾಗಿ ಟಿವಿಎಸ್ ಕ್ರಾಸ್ ಮತ್ತು ಅತ್ತಿಬೆಲೆ ಮಾರ್ಗವಾಗಿ ಹಾಗೂ ಸರ್ಜಾಪುರ ಮಾರ್ಗವಾಗಿ ತಮಿಳುನಾಡಿನಿಂದ ಟಿಪ್ಪರ್ ಲಾರಿಗಳು ಕರ್ನಾಟಕಕ್ಕೆ ಬರುತ್ತವೆ. ಆದರೆ ಒಂದು ಟಿಪ್ಪರ್ ಲಾರಿಗೆ ಎಷ್ಟು ಲೋಡ್ ಹಾಕಬೇಕು ಎಂಬ ನಿಯಮವಿದೆ. ಲೋಡ್ ಮೇಲೆ ಧೂಳು ಹೊರಗೆ ಬರದಂತೆ ಕವರ್ ಮಾಡಬೇಕು ಕೂಡ. ಇದ್ಯಾವುದನ್ನೂ ಮಾಡದೇ ರ್ನಿಲಕ್ಷ$್ಯ ವಹಿಸುತ್ತಿದ್ದು ರಸ್ತೆಯಲ್ಲಿ ಸಂಚಾರ ಮಾಡುವ ಇತರ ವಾಹನಗಳಿಗೆ ತೀರಾ ಕಿರಿಕಿರಿ ಆಗುತ್ತಿದ್ದರೂ ಆರ್ಟಿಒ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿಲ್ಲ. ಬಲಾಢ್ಯರು ಹಾಗೂ ರಾಜಕಾರಣಿಗಳು ಹೆಚ್ಚಾಗಿ ಕ್ರಷರ್ ನಡೆಸುವುದರಿಂದ ಟಿಪ್ಪರ್ಗಳ ವಿರುದ್ಧ ಚಕಾರ ಎತ್ತಲು ಕೂಡ ಹಿಂದೇಟು ಹಾಕುತ್ತಿದ್ದಾರೆ.
ಒಂದು ಕೈಯಲ್ಲಿ ಸ್ಟೇರಿಂಗ್, ಮತ್ತೊಂದು ಕೈಯಲ್ಲಿ ಮೊಬೈಲ್ : ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಟಿಪ್ಪರ್ಗಳು ಕಾನೂನು ಪಾಲನೆ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಒಂದು ಕೈಯಲ್ಲಿ ಸ್ಟೇರಿಂಗ್ ಹಾಗೂ ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದು ವಾಹನ ಚಲಾಯಿಸಿಕೊಂಡು ಬರುವುದು ಅಪಘಾತಕ್ಕೆ ಕಾರಣವಾಗಿದೆ. ಹೆಚ್ಚು ಲೋಡ್ ಹಾಕಿಕೊಂಡು ಬರುತ್ತಿರುವುದರಿಂದ ಕಿರಿಕಿರಿ ಆಗುತ್ತಿದೆ, ಟಿಪ್ಪರ್ ಲಾರಿಗಳ ಚಾಲಕರಿಗೆ ಪಟ್ಟಣಕ್ಕೆ ಬರುವ ಸಮಯ ನಿಗದಿ ಮಾಡಬೇಕು ಹಾಗೂ ಲೋಡ್ ಎಷ್ಟು ಹಾಕಬೇಕು ಎನ್ನುವುದರ ಬಗ್ಗೆ ಆರ್ಟಿಒ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸೂಚನೆ ನೀಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಆನೇಕಲ್ ಮಾರ್ಗವಾಗಿ ಹೊಸೂರಿನಿಂದ ಬೆಂಗಳೂರಿಗೆ ಹೋಗುವ ಟಿಪ್ಪರ್ಗಳು ಅಧಿಕ ಲೋಡ್ ಹಾಕಿಕೊಂಡು ಮನಸೋ ಇಚ್ಛೆ ಹೋಗುತ್ತವೆ. ರಸ್ತೆ ಹಾಳಾಗಿದ್ದು, ಇಂತಹ ರಸ್ತೆಯಲ್ಲಿ ವೇಗವಾಗಿ ಸಂಚಾರ ಮಾಡುತ್ತಾರೆ. ಪ್ರಾಣ ಕೈಯಲ್ಲಿ ಹಿಡಿದುಕೊಂಡು ಹೋಗಬೇಕು. ಇದು ಮತ್ತಷ್ಟು ಅನಾಹುತಕ್ಕೆ ಕಾರಣವಾಗಿದೆ. > ಪ್ರದಿಪ್ಕುಮಾರ್ ಆನೇಕಲ್ ನಿವಾಸಿ ಟಿಪ್ಪರ್ಗಳ ಅಕ್ಕ ಪಕ್ಕದಲ್ಲಿ ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಲು ಭಯ ಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಆರ್ಟಿಒ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕು. > ಲಕ್ಷಿ$್ಮ ಆನೇಕಲ್ ಪಟ್ಟಣದ ನಿವಾಸಿ