ಗುತ್ತಲದಲ್ಲಿ ಹೆಚ್ಚಾಯ್ತು ಮಂಗಗಳ ಹಾವಳಿ; ಮಹಿಳೆ ಮೇಲೆ ದಾಳಿ ಗಾಯ

Monkey attack in guttal
Published on

ಗುತ್ತಲ: ಮನೆಯ ಮೇಲ್ಛಾವಣೆಯ ಮೇಲೆ ಬಿಸಿಲಿಗೆ ಹಾಕಿದ್ದ ಕಾಳುಗಳನ್ನು ತೆಗೆಯುವ ವೇಳೆ ಮಂಗವೊಂದು ಮಹಿಳೆಯ ಮೇಲೆ ದಾಳಿ ಮಾಡಿ ಕೈಗೆ ಬಲವಾಗಿ ಕಚ್ಚಿರುವ ಘಟನೆ ಪಟ್ಟಣದ ವಾರ್ಡ್ ನಂ. 12ರ ಅಜ್ಜಯ್ಯನ ಮಠದ ಬಳಿ ಭಾನುವಾರ ಸಂಜೆ ಸಂಭವಿಸಿದೆ.

ಪಟ್ಟಣದ ಭಾಗ್ಯಜ್ಯೋತಿ ಚನ್ನಬಸಪ್ಪ ಹೂಗಾರ (35) ಗಾಯಗೊಂಡವರು. ಮನೆಯ ಮಾಳಿಗೆ ಮೇಲೆ ಹಾಕಿದ್ದ ಕಾಳುಗಳನ್ನು ತೆಗೆಯಲು ಹೋದಾಗ ಮಂಗವೊಂದು ಏಕಾಏಕಿ ದಾಳಿ ಮಾಡಿದೆ. ಆಗ ಭಾಗ್ಯಜ್ಯೋತಿ ಹಾಗೂ ಮಗಳು ಜೋರಾಗಿ ಕಿರುಚಿಕೊಂಡಾಗ ಸುತ್ತಲಿನ ಜನ ಬಂದು ಮಂಗವನ್ನು ಓಡಿಸಿದ್ದಾರೆ. ಮಹಿಳೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹಾವೇರಿಗೆ ಹೆಚ್ಚಿನ ಚಿಕಿತ್ಸೆಗಾಗಿ ತೆರಳಿದ್ದಾರೆ.

ಕಳೆದ 4-5 ತಿಂಗಳಿನಿಂದ ಪಟ್ಟಣದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಆದರೂ ಅರಣ್ಯ ಇಲಾಖೆ ಮಂಗಗಳನ್ನು ಹಿಡಿಯಲು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಇಲಾಖೆ ಅಧಿಕಾರಿಗಳನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಅಧಿಕಾರಿಗಳು ಇರುವ ಒಂದು ಬೋನನ್ನು ಇಡೀ ತಾಲೂಕಿನಾದ್ಯಂತ ಬಳಸಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದು, ಇಲಾಖೆ ಬೇಜವಾಬ್ದಾರಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net