ನಿಲ್ಲದ ಕಾಡಾನೆಗಳ ಹಾವಳಿ

IMG-20240203-WA0015
ಬೇಲೂರು ತಾಲೂಕಿನ ಬಿಕ್ಕೋಡು ಸಮೀಪದ ಹುಸ್ಕೂರು ಗ್ರಾಮದ ರೈತರ ತೋಟಗಳಲ್ಲಿ ಕಾಡಾನೆಗಳ ಹಾವಳಿಯಿಂದ ಬೆಳೆ ನಾಶವಾಗಿರುವುದು.
Published on

ಬೇಲೂರು: ತಾಲೂಕಿನಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ರೈತರು ಸಂಕಷ್ಟಕ್ಕೊಳಗಾಗಿದ್ದು, ದಿನೇ ದಿನೆ ಬೆಳೆ ನಷ್ಟ ಮಾಡುತ್ತಿರುವುದರಿಂದ ಶಾಶ್ವತ ಪರಿಹಾರಕ್ಕೆ ಮುಂದಾಗುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ತಾಲೂಕಿನ ಬಿಕ್ಕೋಡು ಹೋಬಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಬೆಳೆ ನಷ್ಟ ಸೇರಿದಂತೆ ಜನರಲ್ಲಿ ಭಯ ಹುಟ್ಟಿಸಿ ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಉಪಟಳ ನೀಡುತ್ತಿವೆ. ಜತೆಗೆ ಕಾಡಾನೆಗಳ ಸೆರೆ ಕಾರ್ಯಾಚರಣೆ ಸ್ಥಗಿತಗೊಂಡ ಬೆನ್ನಲ್ಲೆ ಗುಂಪಿನಿಂದ ಬೇರ್ಪಟ್ಟಿರುವ ನಾಲ್ಕೈದು ಕಾಡಾನೆಗಳು ಎಂದಿನಂತೆ ತೋಟಗಳಿಗೆ ನುಗ್ಗಿ ಕಾಫಿ, ಬಾಳೆ, ಅಡಕೆ ಬೆಳೆಗಳನ್ನು ನಾಶ ಮಾಡುತ್ತಿವೆ.

ಶನಿವಾರ ಬಿಕ್ಕೋಡು ಹೋಬಳಿ ಹುಸ್ಕೂರು ಗ್ರಾಮದ ರೈತರಾದ ಎಚ್.ಡಿ.ರಮೇಶ್, ಸಿದ್ದೇಗೌಡ, ರಾಜಯ್ಯ ಹಾಗೂ ಶಂಕರಯ್ಯ ಅವರ ಕಾಫಿ ತೋಟಗಳಿಗೆ ನುಗ್ಗಿರುವ ಕಾಡಾನೆಗಳ ಹಿಂಡು, ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಅಲ್ಲದೆ ಆಹಾರ ಆರಿಸಿ ರಾತ್ರಿ ವೇಳೆ ಗ್ರಾಮಗಳಿಗೆ ನುಗ್ಗುತ್ತಿರುವ ಕಾಡಾನೆಗಳ ಗುಂಪು ಮನೆಗಳ ಹತ್ತಿರ ಬಂದು ಘೀಳಿಡುತ್ತಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಇತ್ತೀಚೆಗೆ ಮತ್ತಾವರ ಗ್ರಾಮದ ಕೂಲಿ ಕಾರ್ಮಿಕ ವಸಂತ ಮೇಲೆ ಒಂಟಿ ಸಲಗ ದಾಳಿ ನಡೆಸಿ ಕೊಂದು ಹಾಕಿದ ಪ್ರಕರಣ ಮಾಸುವ ಮುನ್ನವೇ, ಮನೆಗಳ ಸಮೀಪದ ತೋಟಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿರುವ ಕಾಡಾನೆಗಳಿಗೆ ಹೆದರಿ ಕೂಲಿ ಕಾರ್ಮಿಕರು ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ. ಹಗಲು, ರಾತ್ರಿ ಎನ್ನದೆ ಗ್ರಾಮಗಳ ಹಾಸುಪಾಸಿನಲ್ಲೇ ಸಂಚಾರ ಮಾಡುತ್ತಿರುವುದರಿಂದ ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net