

ಅಥಣಿ ಗ್ರಾಮೀಣ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಕ್ಕರೆ ಕಾರ್ಖಾನೆಗಳು ವಿಷಕಾರಿ ತ್ಯಾಜ್ಯವನ್ನು ಅಥಣಿ ತಾಲೂಕಿನ ಹಳ್ಳಿಗಳ ಹಳ್ಳ, ಕೊಳ್ಳ, ಜಮೀನು ಸೇರಿದಂತೆ ಎಲ್ಲೆಂದರಲ್ಲಿ ತಂದು ಹಾಕುತ್ತಿರುವ ಪರಿಣಾಮ ಇದೀಗ ಗ್ರಾಮಗಳಲ್ಲಿ ರೋಗಗಳ ಭೀತಿ ಉದ್ಭವಿಸಿದ್ದು, ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಅಥಣಿ ತಾಲೂಕಿನ ಪೂರ್ವಭಾಗದ ಬುರ್ಲಟ್ಟಿ, ದಬದಬಹಟ್ಟಿ, ಕೊಡಗಾನೂರ, ಕಟಗೇರಿ, ಕೊಕಟನೂರ, ಬಡಚಿ, ಯಲ್ಲಮ್ಮವಾಡಿ, ಅಡಹಳ್ಳಿ, ಕಕಮರಿ, ಐಗಳಿ, ಕೋಹಳ್ಳಿ, ಯಕ್ಕಂಚಿ, ಬಾಡಗಿ ಸೇರಿ ಹಲವು ಗ್ರಾಮಗಳ ಜಮೀನು ಹಾಗೂ ಹಳ್ಳದ ಪಕ್ಕದಲ್ಲಿ ಕಾರ್ಖಾನೆಗಳು ಕಲುಷಿತ ತ್ಯಾಜ್ಯವನ್ನು ಟ್ಯಾಂಕರ್ ಮೂಲಕ ತಂದು ಹರಿಸಲಾಗುತ್ತಿದೆ. ಇದರಿಂದ ಆ ಭಾಗದಲ್ಲಿ ಜನರಲ್ಲಿ ಕಾಲರಾ, ವಾಂತಿಭೇದಿ, ಕರಳು ಬೇನೆ, ಚರ್ಮರೋಗ, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ವಿರೋಧಕ್ಕೂ ಸೊಪ್ಪು ಹಾಕಿಲ್ಲ: ಕಾರ್ಖಾನೆಯಿಂದ ಹೊರಬರುವ ಕಲುಷಿತ ನೀರನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಮನುಷ್ಯ, ಪ್ರಾಣಿ ಹಾಗೂ ಭೂಮಿ ಸೇರಿ ಒಟ್ಟಾರೆ ಪರಿಸರಕ್ಕೆ ಹಾನಿ ತರುತ್ತಿದೆ. ಇದನ್ನು ಮನಗಂಡ ಸರ್ಕಾರ ಕಲುಷಿತ ನೀರು ಹೊರಬಿಡದಂತೆ ಕಾರ್ಖಾನೆಗಳಿಗೆ ಸೂಚನೆ ನೀಡುತ್ತಿದ್ದರೂ ಕಾರ್ಖಾನೆಗಳು ಅದನ್ನು ಗಂಭೀರವಾಗಿ ಪರಿಗಣಿಸದೇ ಕದ್ದುಮುಚ್ಚಿ ಹಳ್ಳ, ಕೊಳ್ಳ, ಜಮೀನಿನಲ್ಲಿ ಸುರಿದು ಹೋಗುತ್ತಿವೆ. ಅಥಣಿ ತಾಲೂಕಿನ ಸುತ್ತಲಿನ ಜನರು ಇದಕ್ಕೆ ವಿರೋಧ ಮಾಡಿದರೂ ಕಾರ್ಖಾನೆಗಳು ಮಾತ್ರ ಸೊಪ್ಪು ಹಾಕುತ್ತಿಲ್ಲ.
ನೆರೆ ಜಿಲ್ಲೆಯ ಕಾರ್ಖಾನೆಗಳು ಕಲುಷಿತ ನೀರು ಸುರಿಯುತ್ತಿರುವ ಕುರಿತು ಬುರ್ಲಟ್ಟಿ ರೇಣುಕಾ ಸಕ್ಕರೆ ಕಾರ್ಖಾನೆ ಹಾಗೂ ರೈತರು ಪರಿಸರ ಮಾಲಿನ್ಯ
ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಕಲುಷಿತ ನೀರು ಸುರಿಯುತ್ತಿರುವ ನೆರೆ ಜಿಲ್ಲೆಯ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರ ಒತ್ತಾಯವಾಗಿದೆ.