ಪೈಪ್ ಒಡೆದು ಚರಂಡಿ ಸೇರುತ್ತಿದೆ ಜೀವಜಲ

RON WATER WESTE
Published on

ರೋಣ: ಪಟ್ಟಣದ 17ನೇ ವಾರ್ಡ್​ನಲ್ಲಿನ ಮುಖ್ಯ ನೀರಿನ ಪೈಪ್​ಲೈನ್ ಒಡೆದ ಪರಿಣಾಮ ಅಪಾರ ಪ್ರಮಾಣದ ನೀರು ಚರಂಡಿ ಪಾಲಾಗಿ ಪೋಲಾಗುತ್ತಿದೆ.

ಕಳೆದ ಮೂರು ತಿಂಗಳಿಂದ ಒಡೆದಿರುವ ಪೈಪ್​ಲೈನ್ ಸರಿಪಡಿಸುವಂತೆ ಪುರಸಭೆ ಅಧಿಕಾರಿಗಳಿಗೆ ನಿವಾಸಿಗಳು ಮನವಿ ಮಾಡಿದರೂ ಅವರು ಕ್ಯಾರೆ ಎನ್ನುತ್ತಿಲ್ಲ. ಪ್ರತಿ ಬಾರಿ ನೀರು ಪೂರೈಕೆ ಮಾಡಿದಾಗಲೂ ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ. ಚರಂಡಿಯ ಪಕ್ಕದಲ್ಲಿಯೇ ಇರುವ ಪೈಪ್​ಲೈನ್ ಒಡೆದಿದ್ದು ಅದರಲ್ಲಿ ಚರಂಡಿ ನೀರು ತುಂಬಿ ಮನೆಗಳು ಹಾಗೂ ಅಂಗಡಿಗಳಿಗೆ ನುಗ್ಗುತ್ತಿದೆ ಎಂದು ಸ್ಥಳೀಯರಾದ ಕರುಣಾಕರ ಹಾಗೂ ಇತರರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಈ ಕೂಡಲೇ ಪುರಸಭೆ ಅಧಿಕಾರಿಗಳು ಪೈಪ್​ಲೈನ್ ಸರಿಪಡಿಸಬೇಕು ಎಂದು ಆಗ್ರಹಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿ ಮಾತನಾಡಿದ ನೀರು ಸರಬರಾಜು ಅಧಿಕಾರಿ ಬಸವರಾಜ ಕಿರೇಸೂರ ಶೀಘ್ರದಲ್ಲಿ ಒಡೆದಿರುವ ಪೈಪ್​ಲೈನ್ ಸರಿಪಡಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.

ಪೈಪ್​ಲೈನ್ ಒಡೆದ ಕುರಿತು ನಮಗೆ ಯಾವುದೇ ಮಾಹಿತಿ ಇಲ್ಲ. ಯಾರು ದೂರು ನೀಡಿಲ್ಲ. ದೂರವಾಣಿ ಕರೆ ಮಾಡಿದ್ದು, ವಿಷಯ ತಿಳಿದ ಕೂಡಲೇ ಸಮಸ್ಯೆ ಸರಿಪಡಿಸುವಂತೆ ಸೂಚನೆ ನೀಡಿದ್ದೇನೆ. | ರಮೇಶ ಹೊಸಮನಿ ಮುಖ್ಯಾಧಿಕಾರಿ, ರೋಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net