

ಹಿರಿಯೂರು; ಛಾಯಾಗ್ರಹಕ ಕ್ಷೇತ್ರ ಸಾಕಷ್ಟು ಬದಲಾವಣೆಯಾಗಿದ್ದು, ಸವಾಲುಗಳನ್ನು ಎದುರಿಸಿ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ನಮ್ಮೆಲ್ಲರ ಎದುರಿಗಿದೆ ಎಂದು ಛಾಯಾಗ್ರಾಹಕರ ಸಂಘದ ತಾಲೂಕಾಧ್ಯಕ್ಷ ಎಂ.ಎಲ್.ಗಿರಿಧರ್ ಹೇಳಿದರು.
ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ತಾಲೂಕಿನ ಭೀಮನಬಂಡೆ ಶುಭೋದಯ ಶೈಕ್ಷಣಿಕ ಸೇವಾ ವೃದ್ಧಾಶ್ರಮದಲ್ಲಿ ಶನಿವಾರ ಹಣ್ಣು ವಿತರಿಸಿ ಮಾತನಾಡಿದರು.
ಕರೊನಾ ನಂತರ ಛಾಯಾಗ್ರಾಹಕರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಸೌಲಭ್ಯಗಳು ಘೋಷಣೆಗೆ ಸೀಮಿತವಾಗಿದೆ. ದೇಶದ ಇತಿಹಾಸ ಪುಟದಲ್ಲಿ ನೆನಪಿನಲ್ಲಿ ಉಳಿಯುವ ಘಟನಾವಳಿಗಳನ್ನು ಹಿಡಿದಿಟ್ಟಿದೆ ಎಂದರು.
ಸ್ವತಂತ್ರ ಚಳವಳಿ ದೃಶ್ಯಗಳು, ಬಳಿಕ ಪ್ರಜಾಪ್ರಭುತ್ವ ಸರ್ಕಾರ ಅಸ್ಥಿತ್ವ, ಮೊದಲ ಪ್ರಧಾನಿ, ರಾಷ್ಟ್ರಪತಿ, ಸಂವಿಧಾನ ರಚನೆ ಪ್ರಕ್ರಿಯೆ ಸಂದರ್ಭ ಕ್ಲಿಕ್ಕಿಸಿದ ಛಾಯಾಚಿತ್ರಗಳು ಅಪರೂಪದ ದಾಖಲೆಗಳಾಗಿ ಉಳಿದಿವೆ. ಸಾವಿರ ಶಬ್ದಗಳಲ್ಲಿ ಹೇಳಲಾಗದ್ದನ್ನು ಒಂದು ಫೋಟೋ ಹೇಳುತ್ತದೆ, ಛಾಯಾಚಿತ್ರ ಸೌಂದರ್ಯದ ಜೀವಾಳ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಗೌಸ್ ಪೀರ್, ಪಾರ್ಥಸಾರಥಿ, ರಾಮಕೃಷ್ಣ, ಅಜೀಜ್, ನವೀದ್, ಗಿರಿಸ್ವಾಮಿ, ವಿಜಯಕುಮಾರ್, ಸುರೇಶ್, ಗೋವಿಂದರಾಜು, ಮಣಿಕಂಠ, ದಿವುಶಂಕರ್, ಮುಸ್ತಫಾ, ರಘು, ಅರವಿಂದ್, ಲಿಂಗರಾಜು, ಚಿತ್ತಪ್ಪ, ರಂಗನಾಥ್ ಇತರರಿದ್ದರು.