ಗುತ್ತಿಗೆದಾರನಿಗೆ ವಂಚಿಸಿದ್ದ ವ್ಯಕ್ತಿ ಬಂಧನ

4 Dwd 9
Published on

ಧಾರವಾಡ: ಮಹಿಳೆಯ ಹೆಸರಿನಲ್ಲಿ ಫೇಸ್​ಬುಕ್ ನಕಲಿ ಖಾತೆ ತೆರೆದು ಹುಬ್ಬಳ್ಳಿ ತಾಲೂಕಿನ ಗುತ್ತಿಗೆದಾರನಿಂದ ಸುಮಾರು 15 ಲಕ್ಷ ರೂ. ಪಡೆದಿದ್ದ ಹಾಸನ ಮೂಲದ ವ್ಯಕ್ತಿಯನ್ನು ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹಾಸನ ತಾಲೂಕಿನ ದೊಡ್ಡಗಿಣಿಗೇರೆ ಗ್ರಾಮದ ಪ್ರತಾಪ್ ಡಿ.ಎಂ. ಬಂಧಿತ ಆರೋಪಿ. ಈತ ‘ಸುಷ್ಮಾ ಸುಸು’ ಎನ್ನುವ ಹೆಸರಲ್ಲಿ ಫೇಸ್​ಬುಕ್ ನಕಲಿ ಖಾತೆ ತೆರೆದಿದ್ದ. ಅದನ್ನು ಬಳಸಿ ಹುಬ್ಬಳ್ಳಿ ತಾಲೂಕಿನ ಗಂಗಿವಾಳ ಗ್ರಾಮದ ರುದ್ರಗೌಡ ಮಲ್ಲನಗೌಡ ಪಾಟೀಲ ಎಂಬ ಗುತ್ತಿಗೆದಾರನಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಫೇಸ್​ಬುಕ್ ಮುಖಾಂತರ ಪರಿಚಯ ಮಾಡಿಕೊಂಡಿದ್ದ. 2017ರಲ್ಲಿ ವಾಟ್ಸ್ ಆಪ್ ನಂಬರ್ ಪಡೆದು ಸುಮಾರು 3 ವರ್ಷಗಳಿಂದ ರುದ್ರಗೌಡ ಪಾಟೀಲ ಜತೆ ಚಾಟಿಂಗ್ ಮಾಡಿದ್ದ. ಈ ಅವಧಿಯಲ್ಲಿ ತಾನು ಮೂಗಿ, ಕಿವುಡಿ ಎಂದು ಸಂದೇಶ ಮಾಡುತ್ತ ಪ್ರೀತಿಸುತ್ತಿದ್ದು, ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. ಇದನ್ನು ನಂಬಿದ್ದ ರುದ್ರಗೌಡ ಅವರು ಆರೋಪಿ ಪ್ರತಾಪನು ತನ್ನ ಹಾಗೂ ಪರಿಚಯಸ್ಥ 8- 10 ಜನರ ಬ್ಯಾಂಕ್ ಖಾತೆಗಳಿಗೆ ಸುಮಾರು 15 ಲಕ್ಷ ರೂ. ಹಾಕಿಸಿಕೊಂಡು ಮೋಸ ಮಾಡಿದ್ದ. ಈ ಕುರಿತು ರುದ್ರಗೌಡ 2019ರ ಡಿ. 9ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಧಾರವಾಡ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಸಿಪಿಐ ವಿಜಯ ಬಿರಾದಾರ ನೇತೃತ್ವದಲ್ಲಿ ಸಿಬ್ಬಂದಿ, ತನಿಖೆ ಕೈಗೊಂಡು ಹಾಸನ ತಾಲೂಕಿನ ದೊಡ್ಡಗಿಣಿಗೇರೆ ಗ್ರಾಮಕ್ಕೆ ತೆರಳಿ ಆರೋಪಿ ಪ್ರತಾಪನನ್ನು ಬಂಧಿಸಿದ್ದಾರೆ. ಆರೋಪಿಯಿಂದ 1,25,000 ರೂ. ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಡಿವೈಎಸ್​ಪಿಗಳಾದ ರಾಮನಗೌಡ ಹಟ್ಟಿ, ಎಂ.ಬಿ. ಸಂಕದ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ವಿಜಯ ಬಿರಾದಾರ, ಎಎಸ್​ಐಗಳಾದ ವಿ.ಎಸ್. ಬೆಳಗಾಂವಕರ, ಪಿ.ಜಿ. ಕಾಳಿ, ಆರ್.ಎಸ್. ಜಾಧವ ಮತ್ತು ಸಿಬ್ಬಂದಿ ಎಚ್.ಬಿ. ಐಹೋಳಿ, ಎ.ಎ. ಕಾಕರ, ಬಿ.ಎನ್. ಬಳಗಣ್ಣವರ, ಎ.ಎಂ. ನವಲೂರ, ಆರ್.ಎನ್. ಕಮದೋಡ, ಪಿ.ಜಿ. ಪಾಟೀಲ, ಎಂ.ಜಿ. ಪಾಟೀಲ, ಆರ್.ಎ. ಕಟ್ಟಿ, ಯು.ಎಂ. ಅಗಡಿ, ಬಿ.ಎಸ್. ಭೀಮಕ್ಕನವರ ಪ್ರಕರಣ ಭೇದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net