ಕುಸಿದು ಬಿದ್ದು ವ್ಯಕ್ತಿ ಸಾವು

mdk6jay6
Published on

ಮಡಿಕೇರಿ: ನಗರದ ಸ್ವರ್ಣ ಬೇಕರಿಯ ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನಪ್ಪಿದ ಘಟನೆ ಗುರುವಾರ ನಡೆದಿದೆ.

ಜನಾರ್ಧನ(೫೫) ಸಾವನ್ನಪ್ಪಿದ ವ್ಯಕ್ತಿ.

ಬೆಳಗ್ಗೆ ಎಂದಿನಂತೆ ಕಾಫಿ ಸೇವಿಸಿ, ಪತ್ರಿಕೆ ಓದಿದ್ದ ಜನಾರ್ಧನ ಬಳಿಕ ಬಾತ್ ರೂಂಗೆ ತೆರಳಿದ್ದರು. ತಡವಾದರೂ ಕೆಳಗೆ ಬಾರದನ್ನು ಗಮನಿಸಿದ ಬೇಕರಿ ಮಾಲೀಕರು ಬಾತ್ ರೂಂಗೆ ತೆರಳಿ ನೋಡಿದಾಗ ಜನಾರ್ಧನ್ ಬಾತ್ ರೂಂನಲ್ಲಿ ಕುಸಿದು ಬಿದ್ದಿರುವುದು ಕಂಡು ಬಂದಿದೆ. ಬಳಿಕ ಬೇಕರಿಯ ಮಾಲೀಕ ಮತ್ತು ಪಕ್ಕದಲ್ಲಿ ಹೂವು ಮಾರುವ ವ್ಯಕ್ತಿ ಅವರನ್ನು ಕೆಳಗೆ ಹೊತ್ತು ತಂದಿದ್ದಾರೆ. ಈ ಘಟನೆಯ ಕುರಿತು ಬೇಕರಿ ಮಾಲೀಕ ದೇಜಪ್ಪ ಅವರು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಷಯ ತಿಳಿದು ವಿಶ್ವ ಹಿಂದೂ ಪರಿಷತ್‌ನ ಸದಸ್ಯ ಸುರೇಶ್ ಚಂಗಪ್ಪ, ಮನು, ಸತ್ಯ ಮತ್ತಿತ್ತರರು ಸ್ಥಳಕ್ಕಾಗಮಿಸಿದರು. ಈ ಸಂದರ್ಭ ಪೊಲೀಸರ ಮನವಿಯಂತೆ ಹಾಗೂ ಜನಾರ್ಧನ ಅವರ ಸಾವಿಗೆ ನಿಖರ ಮಾಹಿತಿ ತಿಳಿಯದ ಹಿನ್ನೆಲೆಯಲ್ಲಿ ಪಿಪಿಈ ಕಿಟ್ ತೊಟ್ಟು ವಿಎಚ್‌ಪಿ ಸ್ವಯಂ ಸೇವಕರು ಮೃತದೇಹವನ್ನು ತುರ್ತು ವಾಹನದ ಮೂಲಕ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದರು.

ಮೃತ ವ್ಯಕ್ತಿ ಕೊಡಗು ಜಿಲ್ಲೆಯವರಾಗಿದ್ದು, ಮಡಿಕೇರಿ ಸುತ್ತಮುತ್ತಲು ಕೆಲಸ ಮಾಡಿಕೊಂಡಿದ್ದರು. ಆದರೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲದ ಕಾರಣ ನಗರ ಪೊಲೀಸರು ಅಪರಿಚಿತ ಮೃತದೇಹ ಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಸಂಬಂಧಿಕರು ಇದ್ದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣೆ ೦೮೨೭೨-೨೨೯೩೩೩ ಅಥವಾ ೯೪೮೦೮೦೪೯೪೫ ಸಂಖ್ಯೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net