ಲಿಪಿ, ಭಾಷೆಯ ಪರಿಪೂರ್ಣತೆ ಸಾಧಿಸಿದ್ದು ಕನ್ನಡದ ಹೆಗ್ಗಳಿಕೆ

hal kannada
Published on

ಬೆಂಗಳೂರು: ಕ್ರಿ.ಪೂ.3ನೇ ಶತಮಾನದಿಂದ ಕ್ರಿ.ಶ.3ನೇ ಶತಮಾನದ ಮಧ್ಯದ ಅವಧಿಯ ಐತಿಹಾಸಿಕ ದಾಖಲೆಗಳನ್ನು ಪರಿಶೀಲಿಸಿದರೆ ತಮಿಳ ಭಾಷೆಯು ಪ್ರೌಢ ಹಂತವನ್ನು ಮುಟ್ಟುವುದಕ್ಕೆ ಸುಮಾರು ಮೂರು ಶತಮಾನಗಳ ಮುನ್ನವೇ ಕನ್ನಡವು ಲಿಪಿ ಮತ್ತು ಭಾಷೆಯ ಪರಿಪೂರ್ಣತೆಯನ್ನು ಸಾಧಿಸಿತ್ತು ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ದೇಶಕಿ ಡಾ. ಸ್ಮಿತಾರೆಡ್ಡಿ ತಿಳಿಸಿದ್ದಾರೆ.

ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘದ ಮಾಸದ ಮಾತು ಮಾಲಿಕೆಯಲ್ಲಿ ಕನ್ನಡ ಲಿಪಿಯ ವಿಕಾಸ ಮತ್ತು ಕನ್ನಡದ ಹಿರಿಮೆ ವಿಷಯದ ಕುರಿತು ಉಪನ್ಯಾಸದಲ್ಲಿ ಮಾತನಾಡಿದ ಅವರು, ಹಲ್ಮಡಿ ಶಾಸನಗಳಂತಹ ದಾಖಲೆಗಳು ಕನ್ನಡವು, ತಮಿಳುಗಿಂತ ಮುನ್ನವೇ ಅಕ್ಷರಸ್ಥ ಸಮುದಾಯವಾಗಿ ರೂಪಗೊಂಡಿರುವುದನ್ನು ಸ್ಪಷ್ಟವಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಸಾಮ್ರಾಟ ಅಶೋಕ ಕರ್ನಾಟಕದಲ್ಲಿ ಶಾಸನ ಹಾಕಿಸುವುದಕ್ಕಿಂತ ಮುನ್ನವೇ ಪ್ರಾಕೃತ ಭಾಷೆಯು ಕರ್ನಾಟಕದಲ್ಲಿ ಪ್ರಚಲಿತದಲ್ಲಿತ್ತು. ಅಶೋಕನು ಒಟ್ಟು 18 ಬಂಡೆ ಶಾಸನಗಳನ್ನು ಕೊರಸಿದ್ದು, ಅವುಗಳಲ್ಲಿ 9 ಶಾಸನಗಳು ಕರ್ನಾಟಕದಲ್ಲಿಯೇ ಇವೆ. ಅಂದರೆ, ಚಾರಿತ್ರಿಕ ಯುಗದ ಆರಂಭ ಕಾಲದಲ್ಲಿ ಲಿಪಿ-ಭಾಷಾ ಮಾಧ್ಯಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಂಡ ಹಿರಿಮೆ ಇಂದಿನ ಕರ್ನಾಟಕದ್ದು ಆಗಿತ್ತೆಂದು ಅರ್ಥ ಎಂದು ವಿಶ್ಲೇಷಿಸಿದರು.

ಕುಮುದೇಂದು ಮುನಿ ರಚಿಸಿದ 9ನೆಯ ಶತಮಾನದ ಸಿರಿಭೂವಲಯ ಗ್ರಂಥದಲ್ಲಿ ಕನ್ನಡ ಭಾಷೆಗೆ ವಿಶ್ವದ ಎಲ್ಲ ಭಾಷೆಗಳನ್ನು ಅರಗಿಸಿಕೊಳ್ಳುವ ಶಕ್ತಿ ಇದೆ ಎಂಬುದಾಗಿ ಸಾಬೀತುಪಡಿಸಿದ್ದಾರೆ. ಕನ್ನಡ ತೆಲುಗು ಮೌಖಿಕ ಪರಂಪರೆಯು, ತಮಿಳಿನದಕ್ಕಿಂತ ಕಡಿಮೆ ಶ್ರೀಮಂತವೂ ಅಭಿವ್ಯಕ್ತಿಶೀಲವೂ ಆಗಿತ್ತೆಂದು ನಂಬಲು ಯಾವುದೇ ಕಾರಣಗಳಿಲ್ಲ ಎಂದು ತಮಿಳಿನ ಪ್ರಸಿದ್ಧ ಶಾಸನಶಾಸ್ತಜ್ಞ ಡಾ. ಐರಾವತಂ ಮಹಾದೇವನ್ ಹೇಳಿದ್ದಾರೆ. ಇಷ್ಟು ನಿಖರ ಪ್ರಾಚೀನ ಇತಿಹಾಸವಿರುವ ವಾರಸುದಾರರು ನಾವು ಎಂಬುದು ಹೆಮ್ಮೆಕನ್ನಡಿಗರದ್ದಾಗಿದೆ ಎಂದು ಡಾ. ಸ್ಮಿತಾರೆಡ್ಡಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಚಿಂತಕ ರಾ.ನಂ. ಚಂದ್ರಶೇಖರ, ಎಚ್‌ಎಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಡಿ. ರಾಜೇಶ್, ಸಂಘಟನಾ ಕಾರ್ಯದರ್ಶಿ ಎ.ಎಸ್. ವೆಂಕಟೇಶ್, ಕಾರ್ಯದರ್ಶಿ ಕೆ.ಡಿ.ದೇವರಾಜ್, ವಿಮಾನ ಕನ್ನಡ ಸಂಘದ ಗೋಪಾಲ ನಾಯಕ, ಕರ್ನಾಟಕ ಕಾರ್ಮಿಕಲೋಕದ ಬಿ.ವಿ.ರವಿಕುಮಾರ್ ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net