ಬಂಗಡೆ ಮೀನಿನಾಗಿ ಓಡೋಡಿ ಬಂದ ಜನ… ಕಾರಣ ಕೇಳಿದ್ರೆ ಬೆರಗಾಗ್ತಿರಾ!

12KMT3_Bangade2
Published on

ಕುಮಟಾ: ‘ಮೀನು ಪೇಟೆಗೆ ಸಿಕ್ಕಾಪಟ್ಟೆ ಬಂಗಡೆ ಮೀನು ಬಂದಿದೆಯಂತೆ’ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಮಂಗಳವಾರ ಸಂಜೆ ಸಾವಿರಾರು ಜನರು ಮೀನು ಮಾರುಕಟ್ಟೆ ಬಳಿ ಜಮಾಯಿಸಿ ಜಾತ್ರೆಯಂತೆ ನೆರೆದಿದ್ದರು.


ಪ್ರತಿ ವರ್ಷ ಮಳೆಗಾಲ ಆರಂಭವಾದ ಬಳಿಕ ಮಧ್ಯಂತರದಲ್ಲಿ ಸಮುದ್ರ ಶಾಂತವಾಗಿದ್ದರೆ ಮೀನುಗಾರರ ಪಾಲಿಗೆ ಬಂಗಡೆ ಮೀನಿನ ಅದೃಷ್ಟ ಖುಲಾಯಿಸುವುದಿದೆ.

ಅದರಂತೆ ಸಾಯಂಕಾಲ ಯಾಂತ್ರೀಕೃತ ದೋಣಿಯಲ್ಲಿ ಸಮುದ್ರಕ್ಕಿಳಿದ್ದ ಮೀನುಗಾರರಲ್ಲಿ ಕೆಲವರಿಗೆ ಉತ್ತಮ ಬಂಗಡೆ ಮೀನು ಸಿಕ್ಕಿದೆ. ಈ ಸುದ್ದಿ ಮೀನುಗಾರರ ದೋಣಿ ಸಮುದ್ರದಲ್ಲಿರುವಾಗಲೇ ಸಾಕಷ್ಟು ವೈರಲ್ ಆಗಿದ್ದರಿಂದ ಮೀನುಪೇಟೆಗೆ ದೋಣಿಗಳು ಮರಳುವ ಹೊತ್ತಿಗೆ ಜನಸಾಗರವೇ ನೆರೆದಿತ್ತು.
ತಾಜಾ ಮೀನುಗಳಿಗಾಗಿ ಬಂಗಡೆ ಪ್ರಿಯರು ಕಾಯುತ್ತಿದ್ದರು.

ದಕ್ಕೆಯಲ್ಲಿ ನಿಂತ ದೋಣಿಯ ಬಲೆಯಿಂದ ಬಂಗಡೆ ಬಿಡಿಸಿ ಬುಟ್ಟಿ ತುಂಬುವುದಕ್ಕೂ ಪುರುಸೊತ್ತಿಲ್ಲದಂತೆ ಜನ ಖರೀದಿಗೆ ಮುಗಿಬಿದ್ದರು. ಜನ ವಾಹನಗಳಿಂದ ಇಳಿದು ಓಡೋಡಿ ಬಂದರು.


10 ಬಂಗಡೆಗಳಿಗೆ 100 ರೂ. ಎಂದರೂ ಜನರು ಮುಗಿಬಿದ್ದು ಖರೀದಿಸಿದರು. ಬಂಗಡೆ ಮೀನು ಸಿಗುವಾಗ ಬೇರೆ ಮೀನುಗಳತ್ತ ಜನರ ಆಸಕ್ತಿ ಕಡಿಮೆ, ಏಕೆಂದರೆ ಎಲ್ಲ ಮೀನುಗಳ ಪೈಕಿ ಹೆಚ್ಚು ರುಚಿ, ಜನಾಕರ್ಷಣೆ ಹೊಂದಿರುವ ಬಂಗಡೆ ಮೀನಿನ ಜನಪ್ರಿಯತೆ ಹೇಗಿರುತ್ತದೆ ಎಂಬುದನ್ನು ಮೀನುಪೇಟೆಯಲ್ಲಿ ಕಾಣುವಂತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net