ಹಿಂಗಾರು ಮಳೆ ಅಬ್ಬರಕ್ಕೆ ನಲುಗಿದ ಜನತೆ

24 KRN-2..
ಕೆ.ಆರ್.ನಗರದ ಮಧುವನಹಳ್ಳಿ ಬಡಾವಣೆಯಲ್ಲಿ ಮಳೆಯಿಂದ ಕುಸಿದು ಬಿದ್ದಿರುವ ಲಾರಿ ಮಹದೇವರ ಮನೆಯನ್ನು ತಹಸಿಲ್ದಾರ್ ಜಿ.ಸುರೇಂದ್ರಮೂರ್ತಿ ಪರಿಶೀಲಿಸಿದರು. ಗ್ರಾಮ ಲೆಕ್ಕಿಗ ಎಂ.ಎಸ್.ಜಮಖಂಡಿ ಮತ್ತಿತರರು ಇದ್ದರು.
Published on

ಕೆ.ಆರ್.ನಗರ, ಸಾಲಿಗ್ರಾಮ ಭಾಗದಲ್ಲಿ ಅಪಾರ ಹಾನಿ

ಕೆ.ಆರ್.ನಗರ :ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲೂಕುಗಳಲ್ಲಿ ಹಿಂಗಾರು ಮಳೆಯ ಅಬ್ಬರ ಹೆಚ್ಚಾಗಿ ಅವಾಂತರ ಸೃಷ್ಟಿಯಾದರೆ, ಹಲವೆಡೆ ಧಾರಾಕಾರ ಮಳೆಯಿಂದ ಜಮೀನುಗಳಿಗೆ ನೀರು ನುಗ್ಗಿದೆ. ಮನೆಗಳು ಕುಸಿದು ಬಿದ್ದು ಜನ ಪರದಾಡುವಂತಾಗಿದೆ.

ಕೆ.ಆರ್.ನಗರ ತಾಲೂಕಿನ ಗಂಧನಹಳ್ಳಿ ಗ್ರಾಮದ ಕಪ್ಪಡಿ ಕ್ಷೇತ್ರಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಂತೆ ಇರುವ ಗಂಧನಹಳ್ಳಿ ಬಳಿ ಹಂಪಾಪುರ ಹಳೇ ನಾಲೆಗೆ 7ನೇ ಮೈಲಿಯ ಬಳಿ ಬುಧವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯ ನೀರು ನುಗ್ಗಿದ ಪರಿಣಾಮ ನಾಲೆಯ ಏರಿ ಒಡೆದು ಭಾರಿ ಪ್ರಮಾಣದ ನೀರು ರೈತರ ಜಮೀನುಗಳಿಗೆ ನುಗ್ಗಿ ಭತ್ತ, ಬಾಳೆ, ನಾಟಿ ಮಾಡಿದ ಅಡಿಕೆ, ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದ್ದು ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ.

ಇತ್ತ ಪಟ್ಟಣದಲ್ಲಿ ಮಳೆಯ ಅರ್ಭಟಕ್ಕೆ ಜನರು ತತ್ತರಿಸಿದರೆ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು, ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣಕ್ಕೆ ಕೆಲಸ ಕಾರ್ಯ ನಿಮಿತ್ತವಾಗಿ ಬಂದಿದ್ದ ಜನರು ವಾಪಸ್ ಗ್ರಾಮಕ್ಕೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಎರಡು ದಿನಗಳಿಂದ ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮನೆಗಳು ಕುಸಿದು ಬಿದ್ದ ಪರಿಣಾಮ ಜನ ಆಶ್ರಯಕ್ಕೆ ನೆಲೆಯಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಹಸೀಲ್ದಾರ್ ಭೇಟಿ: ಮಳೆಹಾನಿ ಪ್ರದೇಶಕ್ಕೆ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು. ಕೂಡಲೇ ನಾಲೆ ಏರಿಯನ್ನು ತಾತ್ಕಾಲಿಕವಾಗಿ ಮರಳು ಮೂಟೆಯಿಂದ ಮುಚ್ಚಿ ನೀರು ಹರಿಯದಂತೆ ತಡೆ ನಿರ್ಮಾಣ ಮಾಡಲಾಯಿತು. ಬಳಿಕ ಬೆಳೆ ಹಾನಿ ಬಗ್ಗೆ ವರದಿ ಪಡೆದು ಕೊಳ್ಳಲಾಯಿತು. ರಾಜಸ್ವ ನಿರೀಕ್ಷಕ ಶಶಿಕುಮಾರ್ ಹಾಗೂ ಹಾರಂಗಿ ನೀರಾವರಿ ನಿಗಮದ ಕೆ.ಆರ್.ನಗರ ವಿಭಾಗದ ಎಇಇ ಅಯಾಜ್ ಪಾಷ, ಎಇಗಳಾದ ಕಿರಣ್, ಬಿಂದು ಇದ್ದರು.

ರೈತರ ಬೇಡಿಕೆ: ಅತಿ ಹೆಚ್ಚು ಮಳೆಯಾದಾಗ ಮಿರ್ಲೆ ಶ್ರೇಣಿ ನಾಲೆಗಳಾದ ಹಂಪಾಪುರ ನಾಲೆ, ಹೊಸನಾಲೆ, ನಾಯಿನಾಲೆ, ಹಿರಿನಾಲೆ ಹಾಗೂ ಗೋವಿನನಾಲೆಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ಭಾರಿ ಮಳೆಯಾಗಿ ಹೆಚ್ಚುವರಿ ನೀರು ನಾಲೆಗೆ ಹರಿದು ಬರುತ್ತದೆ. ಆದ್ದರಿಂದ ತಾಲೂಕಿನ ಇತರ ನಾಲೆಗಳಾದ ಚಾಮರಾಜ ಎಡದಂಡೆ ಮತ್ತು ಬಲದಂಡೆ ನಾಲೆಗಳ ಆಧುನೀಕರಣ ಕಾಮಗಾರಿ ಕೈಗೊಂಡಂತೆ ಈ ಕಾಲುವೆಗಳ ಕಾಂಕ್ರೀಟ್ ಲೈನಿಂಗ್ ಕಾಮಗಾರಿ ಕೈಗೊಂಡರೆ ರೈತರ ಬದುಕು ಹಸನಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ಕುಸಿದು ಬಿದ್ದ ಮನೆಗಳು: ಪಟ್ಟಣದ ಮಧುವನಹಳ್ಳಿ ಬಡಾವಣೆಯ 23ನೇ ವಾರ್ಡಿನಲ್ಲಿ ಬುಧವಾರ ಬಿದ್ದ ಭಾರಿ ಮಳೆಗೆ 3 ಮನೆಗಳು ಕುಸಿದು ಬಿದ್ದಿವೆ. ಬಡಾವಣೆಯ ನಿವಾಸಿಗಳಾದ ಲಾರಿ ಮಹದೇವ್, ಅಮಾವಾಸೆ, ರಾಮಯ್ಯ ಅವರ ಮನೆ ಕುಸಿದು ಬಿದ್ದಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೇ ಲಕ್ಷಾಂತರ ರೂ. ಬೆಲೆ ಬಾಳುವ ದವಸ ಧಾನ್ಯ, ಮನೆ ಬಳಕೆ ವಸ್ತುಗಳು, ಪೀಠೊಪಕರಣಗಳು ನಾಶವಾಗಿವೆ. ಸ್ಥಳಕ್ಕಾಗಮಿಸಿದ ತಹಸಿಲ್ಧಾರ್ ಜಿ.ಸುರೇಂದ್ರಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಎಲ್.ಶಂಕರಮೂರ್ತಿ, ಗ್ರಾಮ ಲೆಕ್ಕಿಗ ಎಂ.ಎಸ್.ಜಮಕಂಡಿ ಸ್ಥಳ ಪರಿಶೀಲನೆ ಮಾಡಿ ನೊಂದ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net