ಕೊಳ್ಳೇಗಾಲದ ಜನರು ವಿಶೇಷ, ಅಪರೂಪದ ವ್ಯಕ್ತಿತ್ವವುಳ್ಳವರು

3-kollegal-1,,,
ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಆವರಣದಲ್ಲಿ ಮಾನಸೋತ್ಸವ-2024 ಸಮಾರಂಭದಲ್ಲಿ ಮಾನಸ ಪ್ರಶಸ್ತಿಯನ್ನು ಚಲನಚಿತ್ರ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರಿಗೆ ಪ್ರದಾನ ಮಾಡಲಾಯಿತು. ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಎ.ಎಸ್.ಕಿರಣ್ ಕುಮಾರ್, ಪಿ.ಶೇಷಾದ್ರಿ, ಎ.ಆರ್.ಕೃಷ್ಣಮೂರ್ತಿ, ಡಾ.ಎಸ್.ದತ್ತೇಶ್‌ಕುಮಾರ್, ಪ್ರೋ ಎಸ್.ಶಿವರಾಜಪ್ಪ ಇತರರು ಇದ್ದರು.
Published on

ಕೊಳ್ಳೇಗಾಲ: 2024ನೇ ಸಾಲಿನ ಮಾನಸ ಶಿಕ್ಷಣ ಪ್ರಶಸ್ತಿ ಖ್ಯಾತ ಚಲನಚಿತ್ರ ನಿರ್ದೇಶಕ, ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರ ಮುಡಿಗೇರಿತು.

ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಾನಸೋತ್ಸವ-2024 ಉದ್ಘಾಟನಾ ಸಮಾರಂಭ ಹಾಗೂ ಮಾನಸ ಶಿಕ್ಷಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಟಿ.ಎನ್.ಸೀತಾರಾಮ್ ಅವರಿಗೆ ಖ್ಯಾತ ಚಲನಚಿತ್ರ ಮತ್ತು ಕಿರುತೆರೆ ನಿರ್ದೇಶಕ ಪಿ.ಶೇಷಾದ್ರಿ ಮಾನಸ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಟಿ.ಎನ್.ಸೀತಾರಾಮ್ ಭಾಷಣದ ಆರಂಭದಲ್ಲೇ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಓದಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕತ್ತಲಲ್ಲಿಟ್ಟ ಬೆಳಕಿನ ದೀಪ ಭಾರತ ಸಂವಿಧಾನವಾಗಿದೆ. ಪ್ರತಿಯೊಬ್ಬರೂ ಸಂವಿಧಾನವನ್ನು ಸಂಪೂರ್ಣವಾಗಿ ಓದಬೇಕು. ಕೊಳ್ಳೇಗಾಲ ರೇಷ್ಮೆಗೆ ಹೆಸರುವಾಸಿ. ನಾವು ರೇಷ್ಮೇಗೂಡಿನ ಮಾರಾಟಗಾರರು. ಗೌರಿಬಿದನೂರಿನಿಂದ ರೇಷ್ಮೆ ಗೂಡಿನ ಇಲ್ಲಿಗೆ ವ್ಯಾಪಾರಕ್ಕೆ ಬರುತ್ತಿದೆ. ಈ ಊರಿನಲ್ಲಿ ನನ್ನ ಬಹಳ ನೆನಪುಗಳಿದೆ. ಇಲ್ಲಿಯ ಜನರು ವಿಶೇಷ ಹಾಗೂ ಅಪರೂಪದ ವ್ಯಕ್ತಿತ್ವವುಳ್ಳವರು. ಇಂತಹ ಸ್ಥಳದಲ್ಲಿ ಮಾನಸ ಶಿಕ್ಷಣ ಸಂಸ್ಥೆ ಪ್ರಶಸ್ತಿ ಲಭಿಸಿರುವುದು ನನ್ನ ಪುಣ್ಯವಾಗಿದೆ ಎಂದು ತಿಳಿಸಿದರು.

ಚಲನಚಿತ್ರ ಮತ್ತು ಕಿರುತೆರೆ ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ಕೊಳ್ಳೇಗಾಲ ಹಿಂದುಳಿದಿದೆ ಎಂದು ನನಗೆ ಅನಿಸುತ್ತಿಲ್ಲ. ಇಲ್ಲಿನ ಜನರು ಹೃದಯವಂತಿಕೆ, ಶಿಕ್ಷಣದಲ್ಲಿ ಮುಂದಿದ್ದಾರೆ. ಪ್ರಸ್ತುತ ಜಗತ್ತು ಕೈ ಬೆರಳ ತುದಿಯಲ್ಲಿಯೇ ಇದೆ. ಜ್ಞಾನ ಮತ್ತು ತಂತ್ರಜ್ಞಾನ ಅನು ಕೂಲ ಜತೆಗೆ, ಅನನುಕೂಲವನ್ನು ನೀಡಿದೆ. 2010ರ ಹಿಂದಿನ ದೂರದರ್ಶನದ ಧಾರವಾಹಿಗಳಿಗೂ ನಂತರದ ಧಾರವಾಹಿಗಳಿಗೂ ವ್ಯತ್ಯಾಸವಿದೆ. 10 ವರ್ಷಗಳ ಹಿಂದಿನ ಧಾರಾವಾಹಿಗಳು ಕನ್ನಡಿಗರ ಬೌದ್ಧಿಕ ಶಕ್ತಿಯನ್ನು ವಿಸ್ತರಿಸಿದೆ. ಕೊಳ್ಳೇಗಾಲ ಮಾಟ-ಮಂತ್ರ ಪ್ರಖ್ಯಾತಿ ಪಡೆದಿದೆ ಎಂದು ಕೇಳಿದ್ದೇನೆ. ನಿಜವಾಗಿಯೂ ಶ್ರೀ ಮಲೆ ಮಹದೇಶ್ವರ, ಶ್ರೀ ಮಂಟೇಸ್ವಾಮಿ ಮತ್ತು ಶ್ರೀ ಸಿದ್ದಪ್ಪಾಜಿ ದೈವಗಳು ನೆಲೆಸಿರುವ ಪುಣ್ಯಭೂಮಿಯಾಗಿದೆ. ಸಂವಿಧಾನ ಅಂಗೀಕಾರವಾಗಿ 73 ವರ್ಷಗಳು ಕಳೆದಿವೆ. ಇನ್ನೂ ಸಂವಿಧಾನ ಓದಿ ವಾಗ್ದಾನ ಮಾಡುತ್ತಿರುವುದು ನನಗೆ ಆಶ್ಚರ್ಯ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ನಮಗೆ ಭಗವದ್ಗೀತೆ ಇದ್ದಂತೆ. ವಿದ್ಯಾರ್ಥಿಗಳಿಗೆ ಸಂವಿಧಾನ ಆಶಯಗಳನ್ನು ಕಲಿಸುವುದು ಅತ್ಯವಶ್ಯಕವಾಗಿದೆ ಎಂದರು.

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಚಲನಚಿತ್ರ ಮತ್ತು ಧಾರಾವಾಹಿ ಕ್ಷೇತ್ರಗಳಲ್ಲಿ ಟಿ.ಎನ್.ಸೀತಾರಾಮ್ ಅವರ ಹೆಸರು ಅನನ್ಯ. ಹಾಗೆಯೇ ಮಾನಸ ಶಿಕ್ಷಣ ಸಂಸ್ಥೆಯು ಅಗಾಧವಾಗಿ ಬೆಳೆದು ಇಂದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದರು.

ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ದತ್ತೇಶ್‌ಕುಮಾರ್ ಮಾತನಾಡಿದರು. ಹೃದಯೋತ್ಸವ ಸಮಾರಂಭ: ಸಾನ್ನಿಧ್ಯ ವಹಿಸಿದ್ದ ತುಮಕೂರಿನ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಕೊಳ್ಳೇಗಾಲದಲ್ಲಿ ನಡೆಯುತ್ತಿರುವ ಈ ದೊಡ್ಡ ಸಮಾರಂಭವನ್ನು ಮಾನಸೋತ್ಸವ ಎಂಬುದಕ್ಕಿಂತ ಹೃದಯೋತ್ಸವ ಸಮಾರಂಭ ಎನ್ನಬಹುದು. ವಿದ್ಯೆ, ಜ್ಞಾನದ ಹಸಿವು ಮಕ್ಕಳಲ್ಲಿ ಹೆಚ್ಚಾಗಬೇಕು. ಅಕ್ಷರ ಜ್ಞಾನಕ್ಕಿಂತ ಅನುಭವದ ಜ್ಞಾನ ಮುಖ್ಯ. ವಿದ್ವತ್ತಿನ ಶಿಕ್ಷಣಕ್ಕಿಂತ ವಿವೇಕದ ಶಿಕ್ಷಣ ಮುಖ್ಯ. ಶಾರೀರಿಕ ಮತ್ತು ಮಾನಸಿಕ, ಸಧೃಡತೆ ವಿದ್ಯಾರ್ಥಿಗಳಿಗೆ ಅತ್ಯಗತ್ಯ. ಆದ್ದರಿಂದ ಪರಿಪೂರ್ಣ ಶಿಕ್ಷಣವನ್ನು ಎಲ್ಲರೂ ಪಡೆಯಬೇಕು. ಮೊಬೈಲ್ ಬಿಟ್ಟು ವಿದ್ಯಾಭ್ಯಾಸದ ಕಡೆಗೆ ಮಕ್ಕಳು ಗಮನಹರಿಸಬೇಕು. ಮಾನಸ ಶಿಕ್ಷಣ ಸಂಸ್ಥೆ ಈ ಭಾಗದಲ್ಲಿ ಉತ್ತಮ ಶಿಕ್ಷಣ ಸೇವೆಯನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಹರಗುರು ಚರಮೂರ್ತಿಗಳು, ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯವಿದ್ಯಾ ಸಂಶೋಧನಾಲಯದ ವಿಶ್ರಾಂತ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಮಾನಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ನಾಗರಾಜು, ಉಪಾಧ್ಯಕ್ಷೆ ರೂಪಾ ದತ್ತೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net