

ವಿಜಯವಾಣಿ ಸುದ್ದಿಜಾಲ ಪಾವಗಡ
ತಾಲೂಕಿನಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆಯಿಂದ ಪಡಿತರ ಪಡೆಯಲು ಪರದಾಡುವ ಪರಿಸ್ಥಿತಿ ನಿಮಾರ್ಣವಾಗಿದೆ.
ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಆಹಾರ ಇಲಾಖೆ ಸರ್ವರ್ ಸಮಸ್ಯೆಯಿಂದ ದಿನವಿಡೀ ಸರತಿ ಸಾಲಿನಲ್ಲಿ ನಿಂತರೂ ಸಮಸ್ಯೆಗೆ ಪರಿಹಾರವಿಲ್ಲದಂತಾಗಿದೆ. ಸರ್ವರ್ ಮಧ್ಯಾಹ್ನಕ್ಕೆ ಸರಿ ಹೋಗಬಹುದು, ಸಂಜೆಗೆ ಸರಿ ಹೋಗುತ್ತದೆ ಎಂದು ಕಾದು ಕುಳಿತ ಗ್ರಾಹಕರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿ ಮನೆಗೆ ವಾಪಸ್ಸಾಗುತ್ತಿದ್ದಾರೆ.
ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ನ್ಯಾಯಬೆಲೆ ಅಂಗಡಿಗಳ ಮುಖಾಂತರ ಪ್ರತಿ ವ್ಯಕ್ತಿಗೆ 3 ಕೆಜಿ ಅಕ್ಕಿ, 2 ಕೆಜಿ ರಾಗಿ ವಿತರಣೆ ಮಾಡುತ್ತಿದ್ದು, ಕಳೆದ ಒಂದು ವಾರದಿಂದ ಆಹಾರ ಇಲಾಖೆಯ ನ್ಯಾಯಬೆಲೆ ಅಂಗಡಿಗಳ ಸರ್ವರ್ ಇಲ್ಲದ ಜತೆಗೆ ಲಾಗಿನ್ ಆಗದೆ ತೀವ್ರ ತೊಂದರೆ ಉಂಟಾಗಿದೆ. ದೈನಂದಿನ ಕೆಲಸ ಬಿಟ್ಟು ಪಡಿತರ ಅಂಗಡಿ ಎದುರು ಸರ್ವರ್ ಸರಿ ಆಗಬಹುದೆಂಬ ಭರವಸೆಯಲ್ಲಿಯೇ ಕಾದು ಕೂರಬೇಕಿದೆ.
ಸಂಕಷ್ಟದಲ್ಲಿ ಗ್ರಾಹಕರು: ಅಕ್ಟೋಬರ್ ತಿಂಗಳ ಪಡಿತರ ಪಡೆಯಲು ಒಂದು ವಾರದಿಂದ ಕೂಲಿ ಕೆಲಸ ಬಿಟ್ಟು, ರೈತರು ಹೊಲ&ಗದ್ದೆಗಳ ಕೆಲಸ ಕಾರ್ಯಬಿಟ್ಟು ಪಡಿತರ ಪಡೆಯಲು ಬಂದರೆ ಸರ್ವರ್ ಸಮಸ್ಯೆ ಉಂಟಾಗಿ ಅತ್ತ ರೈತರು ಬೆಳೆದ ಬೆಳೆ ಮತ್ತು ಕೂಲಿಯು ಇಲ್ಲದೇ ಇತ್ತ ಪಡಿತರವು ಇಲ್ಲದೇ ಕೂಲಿ ಕಾರ್ಮಿಕರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಸಾರ್ವಜನಿಕರು ಅಲವತ್ತುಕೊಂಡಿದ್ದಾರೆ.
ಸರ್ವರ್ ಸಮಸ್ಯೆಯಿಂದ ಮಳೆಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಪಡಿತರ ವಿತರಣಾ ಕೇಂದ್ರಕ್ಕೆ ಬಂದು ದಿನವಿಡೀ ಕಾದು, ಕೆಲಸ ಬಿಟ್ಟು ಕಾದು ಕುಳಿತುಕೊಳ್ಳುತ್ತಿದ್ದೇವೆ. ಸರ್ವರ್ ಸಮಸ್ಯೆಯಿಂದ ಕೂಲಿ ಕಾರ್ಮಿಕರು ಹಾಗೂ ರೈತರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಸರ್ಕಾರ ಈ ಬಗ್ಗೆ ಶ್ರೀವೇ ಸಮಸ್ಯೆ ಸರಿಪಡಿಸಬೇಕಿದೆ. | ಮೂರ್ತಿ ಕಾವಲಗೆರೆ ಪಟ್ಟಣವಾಸಿ ಕಳೆದ ಒಂದು ವಾರದಿಂದ ಆಹಾರ ಇಲಾಖೆಯ ವೆಬ್ಸೈಟ್ಗೆ ಸರ್ವರ್ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಕಾರಣ ಇಲಾಖೆಯ ವೆಬ್ಸೈಟ್ ಎನ್ಐಸಿಯಿಂದ ಕೆಎಸ್ಡಿಸಿಗೆ ರೂಪಾಂತರಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ತೊಂದರೆ ಎದುರಾಗಿದೆ. ಈ ಸಮಸ್ಯೆ ಬಗ್ಗೆ ಮೇಲಧಿಕಾರಿಗಳಿಗೆ ವರದಿ ನೀಡಲಾಗಿದೆ. ಇನ್ನೆರಡು ದಿನಗಳಲ್ಲಿ ಸರ್ವರ್ ಸಮಸ್ಯೆ ಸರಿಹೋಗಬಹುದು. | ಇ.ಶಶಿಕಲಾ, ಆಹಾರ ಇಲಾಖೆ ಶಿರಸ್ತೇದಾರ್, ಪಾವಗಡ