

ವಿಜಯಪುರ :ಕನಕದಾಸರು ಭಕ್ತಿಯ ಮೂಲಕ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ವಾತಂತ್ರೃ ಹೋರಾಟದ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಕಾತ್ರಾಳ ಗ್ರಾಮದಲ್ಲಿ ಭಾನುವಾರ ನಡೆದ ಭಕ್ತ ಕನಕದಾಸ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೂತನ ಪುತ್ಥಳಿಗಳ ಉದ್ಘಾಟನೆ ಮತ್ತು ಧರ್ಮಸಭೆಗೆ ಚಾಲನೆ ನೀಡಿ ಅವರು ಮಾತನಾಡಿ, ಅಣ್ಣ ಬಸವಣ್ಣ, ಕನಕದಾಸರು, ರಾಯಣ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರು ಒಂದು ಸಮಾಜಕ್ಕೆ ಸೀಮಿತರಾದವರಲ್ಲ.
ಹಾಲುಮತದವರು ಅಪಾರ ದೈವಭಕ್ತಿ ಹೊಂದಿರುವವರು ಎಂದರು. ಹಿಂದಿನ ಅವಧಿಯಲ್ಲಿ ನಾನು ಕೈಗೊಂಡ ನೀರಾವರಿ ಯೋಜನೆಗಳಿಂದಾಗಿ ಈ ಭಾಗದಲ್ಲಿ ರೈತರು ಆರ್ಥಿಕವಾಗಿ ಸಶಕ್ತರಾಗಿದ್ದು ಸಂತಸವಾಗಿದೆ.
ಈ ಭಾಗದಲ್ಲಿ ಬಾಕಿಯಿರುವ 15ನೇ ವಿತರಣೆ ಕಾಲುವೆ, 5 ಎ ಮತ್ತು 5 ಬಿ ನೀರಾವರಿ ಕಾಮಗಾರಿಗಳಿಗೆ ಕೆಬಿಜೆಎನ್‌ಎಲ್ ಆಡಳಿತಾತ್ಮಕ ಅನುಮೋದನೆ ದೊರಕಿದ್ದು, ತ್ವರಿತವಾಗಿ ಟೆಂಡರ್ ಮೂಲಕ 319 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕಾತ್ರಾಳ ಕೆರೆ ತುಂಬಿಸಲೂ ಕೂಡ ಕ್ರಮ ಕೈಗೊಳ್ಳಲಾಗಿದೆ.
ಕೈಗಾರಿಕೆ ಸಚಿವನಾಗಿ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಆದ್ಯತೆ ನೀಡಿದ್ದು, ಎರಡು ಕಂಪನಿಗಳು ಉದ್ಯಮ ಸ್ಥಾಪನೆಗೆ ಮುಂದಾಗಿವೆ. ಜೆಎಸ್‌ಡಬ್ಲ್ಯೂ ಸಂಸ್ಥೆ ಜತೆ ಮಾತುಕತೆ ಪ್ರಗತಿಯಲ್ಲಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಸರೂರ ಅಗತೀರ್ಥ ಹಾಲುಮತ ಗುರುಪೀಠದ ರೇವಣಸಿದ್ಧೇಶ್ವರ ಶಾಂತಮಯ ಮಹಾಸ್ವಾಮಿಗಳು ಮಾತನಾಡಿ, ಸಚಿವ ಎಂ.ಬಿ. ಪಾಟೀಲರು ಬಿಸಿಲ ನಾಡಿನಲ್ಲಿ ಭೂಮಿ ತಾಯಿಗೆ ಅಗತ್ಯವಾದ ನೀರು ನೀಡುವ ಮೂಲಕ ಪ್ರಕೃತಿಯಲ್ಲಿ ಹಸಿರು ಸಮೃದ್ಧಿಯಾಗಿರುವಂತೆ ಮಾಡಿ ಜನರು ನೆಮ್ಮದಿ ಬದುಕು ಕಟ್ಟಿಕೊಳ್ಳಲು ಆಸರೆಯಾಗಿದ್ದಾರೆ ಎಂದರು.
ಹುಲಜಂತಿ ಪಟ್ಟದ ಮಾಳಿಂಗರಾಯ ಮಹಾರಾಯರು ಆಶೀರ್ವಚನ ನೀಡಿದರು. ಖ್ಯಾತ ವಾಗ್ಮಿ ಮತ್ತು ಯುವ ಮುಖಂಡ ಮೋಹನ ಮೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗೊಳಸಾರದ ಅಭಿನವ ಪುಂಡಲಿಂಗೇಶ್ವರ ಮಹಾರಾಜರು, ಹಂದಿಗುಂದ ಹಾಲಸಿದ್ಧನಾಥನ ಮಠದ ಶ್ರೀಮಂತ ಶಿವಯೋಗಿ ಅಜ್ಜನವರು, ಬಳಗಾನೂರಿನ ಸೋಮರಾಯ ಮುತ್ಯಾ, ಮಲಕಾರಿಸಿದ್ಧ ಒಡೆಯರು, ಮಲ್ಲಯ್ಯ ಮಠ, ವಿಠಲ ಪಡಸಲಗಿ, ರಾಜು ಕಂಬಾಗಿ, ಸಾಬು ಮಾಶ್ಯಾಳ, ಮಲ್ಲಿಕಾರ್ಜುನ ಪರಸಣ್ಣವರ, ಮಲ್ಲು ಬಿದರಿ, ವಿಠಲ ಪಡಸಲಗಿ, ಕಲ್ಲಪ್ಪಗೌಡ ನ್ಯಾಮಗೌಡ, ಎಂ.ಡಿ. ಪಡಸಲಗಿ, ಬಾಳೇಶ ಪಡಸಲಗಿ, ತುಕಾರಾಮ ಪಡಸಲಗಿ, ಅಮೋಘಿ ಗಲಗಲಿ, ಲಕ್ಷ್ಮಣ ಜಿರಲಿ ಮತ್ತಿತರರಿದ್ದರು.
ಕಾರ್ಯಕ್ರಮಕ್ಕೂ ಮುಂಚೆ ಭಕ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಭಾವಚಿತ್ರಗಳ ಮೆರವಣಿಗೆ ಮತ್ತು ಕುಂಭಮೇಳ ನಡೆಯಿತು.