ಗಜೇಂದ್ರಗಡ ನೆಲದ ಜನರು ನಿಜವಾದ ಕನ್ನಡಿಗರು

22 GJD 1- kumbar
Published on

ಗಜೇಂದ್ರಗಡ: ನಮ್ಮ ಪ್ರಾಚೀನರು ವಿಭಾಗಿಸುವ ಕಿಸುಗಾಡು 70 ಮತ್ತು ಬೆಳ್ವಲ 300 ಎಂಬ ಪ್ರದೇಶದ ವ್ಯಾಪ್ತಿಗೆ ಗಜೇಂದ್ರಗಡ ಒಳಪಟ್ಟಿದೆ. ಈ ನೆಲದ ಜನರು ನಿಜವಾದ ಕನ್ನಡಿಗರಾಗಿದ್ದಾರೆ ಎಂದು ಸಾಹಿತಿ, ಸಂಶೋಧಕ ಮಲ್ಲಿಕಾರ್ಜುನ ಕುಂಬಾರ ಹೇಳಿದರು.

ಪಟ್ಟಣದ ಜಗದ್ಗುರು ತೋಂಟದಾರ್ಯ ಸಿಬಿಎಸ್​ಇ ಶಾಲೆ ಆವರಣದಲ್ಲಿ ಅಂದಾನಪ್ಪ ದೊಡ್ಡಮೇಟಿ - ವಿರೂಪಾಕ್ಷಪ್ಪ ಅಬ್ಬಿಗೇರಿ ಪ್ರದಾನ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಮಂಗಳವಾರ ಬೆಳಗ್ಗೆ ನಡೆದ ಗಜೇಂದ್ರಗಡ ಇತಿಹಾಸ ಮತ್ತು ಪರಂಪರೆ ವಿಶೇಷ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಗಜೇಂದ್ರಗಡದ ಗುಡ್ಡ ಇಂದ್ರನ ಐರಾವತ ಮಲಗಿದಂತೆ ಕಾಣುವುದರಿಂದ ಹಾಗೂ ಗುಡ್ಡದ ಮೇಲೆ ಕೋಟೆ ಇರುವುದರಿಂದ ಇದಕ್ಕೆ ಗಜೇಂದ್ರಗಡ ಎಂಬ ಹೆಸರು ಬಂದಿದೆ ಎಂದರು.

ಗಜೇಂದ್ರಗಡದ ಘೊರ್ಪಡೆಯವರು ನೀರಾವರಿಗೆ ಕೊಟ್ಟ ಮಹತ್ವ ಬೇರೆಯಾರು ನೀಡಿಲ್ಲ. ಕೋಟೆ ಒಳಗೆ ನಂದಿ-ಹುಲಿಯಿರುವ ಹೊಂಡ, ಅಕ್ಕ-ತಂಗಿ ಹೊಂಡ, ಮಂಗ್ಯಾನ ಹೊಂಡ, ಆಕಳ ಹೊಂಡ, ಅಗಸರ ಹೊಂಡಗಳನ್ನು ಕಟ್ಟಿ ನೀರು ಸಂಗ್ರಹಿಸಲು ಬಳಸುತ್ತಿದ್ದರು. ಈ ಗುಡ್ಡ ಗೋಡೆಯಂತಿದೆ. ಹೀಗಾಗಿ ಗುಡ್ಡ ಏರಲು ಬರುವ ಜಾಗದಲ್ಲಿ ಮಾತ್ರ ಕೋಟೆ ಕಟ್ಟಿದ್ದಾರೆ. ಕೋಟೆ ಗೋಡೆಯ ಸಂದುಗಳಲ್ಲಿ ಬಂದೂಕು ಇರಿಸಿ ವೈರಿಗಳ ಮೇಲೆ ಗುಂಡು ಹಾರಿಸಲು ಹಾಗೂ ಸಂದಿಗಳ ಮೂಲಕ ಕಾದ ಮರಳು, ಹಾವು, ಚೋಳುಗಳನ್ನು ವೈರಿಗಳ ಮೇಲೆ ಎರಚಲು ಬಳಸುತ್ತಿದ್ದರು ಎಂದರು.

ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಅಜಿತ್ ಘೊರ್ಪಡೆ ಮಾತನಾಡಿ, ನಮ್ಮ ಭಾಗದ ಜಕ್ಕಲಿ ಗ್ರಾಮದ ಅಂದಾನಪ್ಪ ದೊಡ್ಡಮೇಟಿ ಅವರು 1937ರಲ್ಲಿ ಮುಂಬೈ ಅಸೆಂಬ್ಲಿಯಲ್ಲಿ ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡ ಮೊಳಗಿಸಿದ್ದರು ಎಂಬುದು ನಮ್ಮ ಭಾಗದ ಹೆಮ್ಮೆ ಎಂದರು.

ಸಾಹಿತಿ ಐ.ಜೆ. ಮ್ಯಾಗೇರಿ ಮಾತನಾಡಿ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಗಡಿ ಭಾಗದಲ್ಲಿ ಬರುವ ಗಜೇಂದ್ರಗಡ ಭಾಗದ ಪ್ರದೇಶ ಅತ್ಯಂತ ನಿರ್ಭಾಗ್ಯದ ಪ್ರದೇಶವಾಗಿದೆ. ಇಟಗಿ ಭಾಗದ 13 ಸೀಮೆಯ ಹಳ್ಳಿಗಳ ಜನರು ಹೈದರಾಬಾದ್ ಕರ್ನಾಟಕ ವಿಮೋಚನೆಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಹೀಗಾಗಿ 13 ಸೀಮೆಯ ಹಳ್ಳಿಗಳಿಗೆ 371ಜೆ ಮೀಸಲಾತಿ ವಂಚಿತರಾಗಿದ್ದಾರೆ. ಅವರಿಗೆ ಈ ಮೀಸಲಾತಿ ಸಿಗಬೇಕು. ಗಜೇಂದ್ರಗಡದಲ್ಲಿ ನೇಕಾರರ ಕೇಂದ್ರ, ಕುಶಲಕರ್ವಿುಗಳ ಕೇಂದ್ರ ಸ್ಥಾಪಿಸಿ ಉದ್ಯೋಗ ನೀಡಬೇಕು. ಗಜೇಂದ್ರಗಡದ ಕಾಲಕಾಲೇಶ್ವರ ದೇವಾಲಯ ಗುಹಾಂತರ ದೇವಾಲಯದ ಪ್ರಯೋಗ ಶಾಲೆಯಾಗಿದ್ದು, ಬಾದಾಮಿ, ಐಹೊಳೆ, ಪಟ್ಟದಕಲ್ಲು ಮಾದರಿ ಶಾಲೆಗಳಾಗಿವೆ ಎಂದರು.

ಸಮ್ಮೇಳನದ ಅಧ್ಯಕ್ಷ ಪೊ›.ಚಂದ್ರಶೇಖರ ವಸ್ತ್ರದ, ಬಿ.ವಿ. ಮುನವಳ್ಳಿ, ರೋಣ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಶಿಕಲಾ ಪಾಟೀಲ, ಕಸ್ತೂರೆಮ್ಮ ಹಿರೇಮಠ, ಬಿ.ಟಿ. ಹೊಸಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net