ವೈಚಾರಿಕತೆಯ ಮೇರು ಪರ್ವತ ಕುವೆಂಪು

30mdk13
ಕಾರ್ಯಕ್ರಮದಲ್ಲಿ ಸಾಹಿತಿ ಭಾರದ್ವಾಜ್ ಕೆ.ಆನಂದ ತೀರ್ಥ ಅವರನ್ನು ಸನ್ಮಾನಿಸಲಾಯಿತು. ಡಾ. ನಾಗೇಂದ್ರಸ್ವಾಮಿ, ಕೆ.ಎಸ್. ರುದ್ರಪ್ಪ, ಕೆ.ಎಸ್.ಮೂರ್ತಿ, ಉದಯಕುಮಾರ್, ಕೆ. ರಾಮಚಂದ್ರ, ಮಂಜುನಾಥ್ ಇತರರು ಇದ್ದರು.
Published on

ಕುಶಾಲನಗರ: ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಮೂಲಕ ನಾಡಿನಲ್ಲಿ ವೈಚಾರಿಕತೆ ಭಿತ್ತಿದ ಸಾಹಿತ್ಯದ ಮೇರು ಪರ್ವತ ಕುವೆಂಪು ಎಂದು ಹಿರಿಯ ಸಾಹಿತಿ ಕಣಿವೆ ಭಾರದ್ವಾಜ್ ಕೆ.ಆನಂದ ತೀರ್ಥ ಅಭಿಪ್ರಾಯಪಟ್ಟರು.

ಕುಶಾಲನಗರದ ಸಾಹಿತ್ಯಾಸಕ್ತರ ವೇದಿಕೆಯಿಂದ ಸ್ಥಳೀಯ ಕನ್ನಡ ಭಾರತಿ ಪಿಯು ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕುವೆಂಪು ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾತಿ, ಮತ, ಪಂಥಗಳನ್ನು ಮೆಟ್ಟಿನಿಂತು ಸಂಘರ್ಷಗಳನ್ನು ಎದುರಿಸಿ ಮಾನವತೆಯ ಮೇರು ಗಿರಿಯಾದ ಕುವೆಂಪು ಪರಿಸರವನ್ನೇ ದೇವರೆಂದರು. ಪರಿಸರವನ್ನು ಆಹ್ಲಾದಿಸಿ, ಆಸ್ವಾದಿಸಿದ ರಸಕವಿ. ತಮ್ಮ ಕಥೆ, ಕವನ, ಕಾದಂಬರಿ, ನಾಟಕ ಮೊದಲಾದ ಮಹಾಗ್ರಂಥಗಳನ್ನು ಬರೆದು ನಾಡಿನ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಆದ್ದರಿಂದ ಇಂದಿನ ವಿದ್ಯಾರ್ಥಿ ಸಮೂಹ ಕನ್ನಡ ನಾಡಿಗೆ ರಸ ಋಷಿ ಕುವೆಂಪು ಕೊಟ್ಟಿರುವ ಸಾಹಿತ್ಯ ಉಳಿಸಿಕೊಂಡು ಹೋದರೆ ಅದು ಆ ವಿಶ್ವಮಾನವನಿಗೆ ಕೊಡುವ ಗೌರವವಾಗಲಿದೆ ಎಂದರು.

ಕುವೆಂಪು ವಿಚಾರಧಾರೆಗಳ ಕುರಿತು ಮಾತನಾಡಿದ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ನಾಗೇಂದ್ರಸ್ವಾಮಿ, ಅಖಂಡ ಕರ್ನಾಟಕದ ನಿರ್ಮಾಣಕ್ಕೆ ಕವಿಗಳು, ಸಾಹಿತಿಗಳು, ಋಷಿಮುನಿಗಳ ಕೊಡುಗೆಯನ್ನು ಬಣ್ಣಿಸಿದ್ದ ಕುವೆಂಪು, ಬೂಟಾಟಿಕೆಯ ರಾಜಕಾರಣವನ್ನು ಹರಿತವಾದ ಲೇಖನಿಯಲ್ಲಿ ಪ್ರಬಲವಾಗಿ ವಿರೋಧಿಸಿದ್ದರು. ಕನ್ನಡ ನಾಡು-ನುಡಿ, ಭಾಷೆ, ಸಂಸ್ಕೃತಿಗೆ ಜೀವ ಸವೆಸುವ ಮೂಲಕ ಸಾಹಿತ್ಯ ಲೋಕದಲ್ಲಿ ಸತ್ಯ-ಶಾಂತಿ, ಸಮಾನತೆಯೆಂಬ ಆರದ ಜ್ಯೋತಿ ಹಚ್ಚಿದ ಮರೆಯಲಾಗದ ಮಾಣಿಕ್ಯ. ಇಂದಿನ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಮಾರಕವಾದ ಮೊಬೈಲ್ ದೂರವಿಟ್ಟು ಕುವೆಂಪು ಸಾಹಿತ್ಯ ಓದಬೇಕು ಎಂದರು.

ರಾಷ್ಟ್ರಕವಿ ಕುವೆಂಪು ಕುರಿತಾದ ಭಾಷಣ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಕನ್ನಡ ಭಾರತಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಸ್ಪಂದನಾ, ಕುವೆಂಪು ಕುರಿತು ಮಾತನಾಡಿದರಲ್ಲದೆ, ಕುವೆಂಪು ವಿರಚಿತ ಕಾನೂರು ಸುಬ್ಬಮ್ಮ ಹೆಗ್ಗಡತಿ ಹಾಗೂ ಮಲೆಗಳಲ್ಲಿ ಮದು ಮಗಳು ಮೇರು ಗ್ರಂಥಗಳನ್ನು ಓದಬೇಕೆಂದು ಅನಿಸಿಕೆ ವ್ಯಕ್ತಪಡಿಸಿದರು.

ಕನ್ನಡ ಭಾರತಿ ಪದವಿ ಕಾಲೇಜಿನ ಪ್ರಾಂಶುಪಾಲ ಕೆ.ಎಸ್.ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಸಾಹಿತಿ ಭಾರದ್ವಾಜ್ ಕೆ.ಆನಂದ ತೀರ್ಥ ಅವರನ್ನು ವೇದಿಕೆಯಿಂದ ಗೌರವಿಸಲಾಯಿತು.

ಸಾಹಿತ್ಯಾಸಕ್ತರ ವೇದಿಕೆಯ ಸಂಚಾಲಕ ಕೆ.ಎಸ್. ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುರಸಭೆಯ ಆರೋಗ್ಯಾಧಿಕಾರಿ ಉದಯಕುಮಾರ್, ಕಾಲೇಜಿನ ಉಪನ್ಯಾಸಕ ಕೆ.ರಾಮಚಂದ್ರ, ಮಂಜುನಾಥ್ ಅಮೃಯ, ವಿಸ್ಮಿತಾ, ಅಂಜಲಿ, ಪ್ರಜ್ವಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net