

ಶಿರಸಿ: ಭಗವಂತನ ಅನುಗ್ರಹದಿಂದ ಜ್ಞಾನದ ದಾರಿ ಸುಲಭ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಚಾತುರ್ವಸ್ಯ ಹಿನ್ನೆಲೆಯಲ್ಲಿ ತೋಟದ ಸೀಮೆಯ ಶಿಷ್ಯರಿಂದ ಬುಧವಾರ ಸೇವೆ ಸ್ವೀಕರಿಸಿ ಮಾತನಾಡಿದರು.
ಈ ಸಂಸಾರ ಬಂಧನವನ್ನು ಬಿಡಿಸುವವನು ಭಗವಂತ ನೃಸಿಂಹ. ನಾವೆಲ್ಲರೂ ಹುಟ್ಟುತ್ತೇವೆ, ಸಾಯುತ್ತೇವೆ ಹೀಗೆ ಮತ್ತೆ ಮತ್ತೆ ಆಗುತ್ತಲೇ ಇರುತ್ತವೆ. ಇವೆ ಸಂಸಾರ ಬಂಧನ. ಹುಟ್ಟು -ಸಾವು ಎಂಬ ಚಕ್ರವನ್ನು ಬಿಡಿಸಿಕೊಡುವವನು ನೃಸಿಂಹ. ಅದೇ ಅವನು ಕೊಡುವ ಬಿಡುಗಡೆ ಎಂದರು.
ನಮ್ಮ ಎಲ್ಲ ಧರ್ಮದ ಚಿಂತನೆಗೆ ಅತ್ಯಂತ ಮೂಲಭೂತವಾದ ಅಂಶವಾದ ಬಂಧನ ಮತ್ತು ಬಿಡುಗಡೆಯ ಬಗ್ಗೆ ವಿವರಿಸಿದರು. ಪರಮಾತ್ಮನ ಮತ್ತು ನನ್ನ ಸಂಬಂಧದ ಸಾಕ್ಷಾತ್ಕಾರವೇ ಜ್ಞಾನ. ಪರಮಾತ್ಮನಿಗೂ ನನಗೂ ಇರುವ ಒಂದು ಅದ್ಭುತವಾದ ಸಂಬಂಧ ಇದೆ. ಇದನ್ನು ಅರಿತುಕೊಳ್ಳಬೇಕು. ಅದು ಅನೇಕ ಆವರಣಗಳ ಮೂಲಕ ಮುಚ್ಚಿಕೊಂಡಿದೆ. ತಲೆಯ ಮೇಲೆ ತುಂಬ ಭಾರ ಹೊತ್ತುಕೊಂಡು ಹೋಗುವಾಗ ಅನೇಕ ವೇದನೆಗಳು ಆಗುತ್ತವೆ. ಅದನ್ನು ಒಂದು ಕಡೆ ಇಳಿಸಿದರೆ ನಂತರ ಅವನು ಸುಖವನ್ನು ಅನುಭವಿಸುತ್ತಾನೆ. ಹಾಗೆಯೇ ನಾವು ಕಟ್ಟಿಕೊಂಡಿರುವ ಎಲ್ಲ ಸುತ್ತುಗಳನ್ನು ಕಳಚಿಕೊಂಡರೆ ಇದೇ ರೀತಿಯ ಅನುಭವಗಳು ಆಗುತ್ತವೆ. ಆದ್ದರಿಂದ ಇಂತಹ ಸುಖವನ್ನು ಪಡೆಯಲು ನಾವು ಪ್ರಯತ್ನಿಸಬೇಕು. ಪರಮಾತ್ಮನ ಮತ್ತು ನಮ್ಮ ನಡುವಿನ ಹತ್ತಿರದ ಸಂಬಂಧದ ಅವಿರ್ಭಾವ. ಇದನ್ನು ನರಸಿಂಹ ದೇವರು ಉಂಟುಮಾಡುತ್ತಾನೆ. ಹಾಗೆಯೇ ಗುರುಗಳು ಅವಿದ್ಯೆಯನ್ನು ನಾಶಮಾಡಿ ವಿದ್ಯೆಯನ್ನು ಕೊಟ್ಟು ಪರಮಾತ್ಮನ ಅನುಭವಕ್ಕೆ ದಾರಿ ತೋರಿಸುತ್ತಾರೆ. ಜ್ಞಾನದ ಬೆಳಕನ್ನು ನೀಡುವ ಸಾಮರ್ಥ್ಯ ಇರುವುದರಿಂದ ಅದಕ್ಕಾಗಿ ಗುರು ಎಂದು ಕರೆಯುತ್ತಾರೆ ಎಂದರು.
ತೋಟದ ಸೀಮೆ ಕೇಶವ ಹೆಗಡೆ, ಮಹಾಬಲೇಶ್ವರ ಹೆಗಡೆ, ಅನಂತ ಭಟ್ , ನಾರಾಯಣ ಹೆಗಡೆ ಇತರರು ಇದ್ದರು.