

ಶೃಂಗೇರಿ: ಮಲೆನಾಡಿನಲ್ಲಿ ಜಲ್ವಂತ ಸಮಸ್ಯೆಗಳನ್ನು ಗಮನಿಸಿದಾಗ ಅದಕ್ಕೆ ಪರಿಹಾರ ನೀಡುವ ಇಚ್ಛಾಶಕ್ತಿ ಅಧಿಕಾರಿಗಳಲ್ಲಿ ಇಲ್ಲದ ಕಾರಣ ಇಲ್ಲಿರುವ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಪಕ್ಷಾತೀತ ಹೋರಾಟ ಸಮಿತಿ ಪ್ರಾರಂಭಿಸಲಾಗಿದೆ ಎಂದು ಮಲೆನಾಡು ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ತಿಳಿಸಿದರು.
ಶುಕ್ರವಾರ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜ.8ರಂದು ತಾಲೂಕು ಕಚೇರಿ ಎದುರು ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಹೇಳಿದರು.
ಬಹಳ ವರ್ಷಗಳ ಹಿಂದೆ ನಮೂನೆ 50ರಿಂದ 57ರಲ್ಲಿ ರೈತರು ಅಕ್ರಮ-ಸಕ್ರಮ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಹಲವರು ಹಕ್ಕುಪತ್ರ ಹಾಗೂ ಪಹಣಿ ಪಡೆದಿದ್ದಾರೆ. ಸರ್ಕಾರದ ಆದೇಶದಂತೆ ನಿವೇಶನರಹಿತರು ನಮೂನೆ 94ಸಿ ಹಾಗೂ 94 ಸಿಸಿಗಳಲ್ಲಿ ಅರ್ಜಿ ಸಲ್ಲಿಸಿದ್ದು, ಹತ್ತು ವರ್ಷಗಳ ಬಳಿಕ ಸಾರ್ವಜನಿಕರ ಮನವಿ ಪುರಸ್ಕರಿಸಿ ಹಿಂದಿನ ತಹಸೀಲ್ದಾರ್ ಅಂಬುಜಾ ಹಕ್ಕುಪತ್ರ ನೀಡಿದ್ದರು. ಬಳಿಕ ಅದರಲ್ಲಿ ಕೆಲವು ಅಕ್ರಮವಾಗಿ ನೀಡಲಾಗಿದೆ ಎಂಬ ದೂರಿನ ಅನ್ವಯ ತನಿಖೆ ನಡೆದು ಪ್ರಕರಣಗಳು ಅಕ್ರಮ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಎ.ಸಿ.ನಾಗರಾಜ್ ನೇತತ್ವದಲ್ಲಿ ತಂಡ ರಚಿಸಿ ವಾಸ್ತವಾಂಶ ನೀಡಲಾಗಿತ್ತು. ಆದರೆ ತಹಸೀಲ್ದಾರ್ ಗೌರಮ್ಮ ಅವರು ಲಾನುಭವಿಗಳನ್ನು ಕರೆಸಿ ದಾಖಲೆ ಪಡೆದು ಹಕ್ಕುಪತ್ರ ರದ್ದುಪಡಿಸಿದ್ದಾರೆ. ಇದರಿಂದ ನೈಜ ಲಾನುಭವಿಗಳಿಗೆ ಅನ್ಯಾಯ ಹಾಗೂ ನಾಗರಿಕ ಹಕ್ಕುಗಳಿಗೆ ವಿರುದ್ಧವಾದ ಕ್ರಮವಾಗಿದೆ. ತಾಲೂಕಿನಲ್ಲಿ ಹಲವಾರು ಸಮಸ್ಯೆಗಳು ಇದ್ದರೂ ಅಧಿಕಾರಿಗಳ ಸ್ಪಂದನೆ ಸೂಕ್ತವಾಗಿಲ್ಲ ಎಂದರು.
ಉಪಾಧ್ಯಕ್ಷ ಮಾರನಕುಡಿಗೆ ನಾಗೇಶ್, ಪ್ರಧಾನ ಕಾರ್ಯದರ್ಶಿ ರಮೇಶ್ ಕಚ್ಚೋಡಿ, ಸಹಕಾರ್ಯದರ್ಶಿಗಳಾದ ಡಾ. ಅಣ್ಣಾದೊರೈ, ಗೊಳ್ಗೋಡು ಚಂದ್ರಶೇಖರ್, ಸಂಚಾಲಕರಾದ ಕಚ್ಚೋಡಿ ಶ್ರೀನಿವಾಸ್, ಕಿಗ್ಗಾ ನಾಗರಾಜ್ ಭಟ್ ಇದ್ದರು.