

ಮುಳಬಾಗಿಲು: ಸಂಪನ್ಮೂಲಗಳನ್ನು ಕ್ರೋಢಿಕರಿಸಿ ದೇವಾಲಯ ಕಟ್ಟುವುದು ದೊಡ್ಡ ವಿಚಾರವಲ್ಲ, ಸಂಸ್ಕಾರದಿಂದ ಭಗವಂತನನ್ನು ಪೂಜಿಸಿ ನಮ್ಮ ಕಡೆ ಮುಖ ಮಾಡುವಂತೆ ಬದುಕುವುದು ಬಹಳ ಮುಖ್ಯ ಎಂದು ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.
ತಾಲೂಕಿನ ಪೊಂಬರಹಳ್ಳಿಯಲ್ಲಿ ಶ್ರೀ ಬೃಂದಾವನ ವರದರಾಜಸ್ವಾಮಿ ದೇವಾಲಯದ ವಿಮಾನ ಗೋಪುರ, ಶಿಲಾ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿ, ಇಲ್ಲಿ ಯಾರು, ಯಾವೂದು ಶಾಶ್ವತವಲ್ಲ. ಹುಟ್ಟು ಮತ್ತು ಸಾವು ಎಂಬ ಖಚಿತಗಳ ನಡುವೆ ಇರುವ ಬದುಕು ಭಗವಂತ ನೀಡಿದ ಭಿೆ. ಪ್ರತಿಯೊಬ್ಬರ ಪರಮೋಚ್ಛ ಗುರಿ ಭಗವಂತನನ್ನು ಹೊಂದುವುದಾಗಿರಬೇಕು. ಭಗವಂತನ ಬಳಿ ಅತ್ಯಂತ ಶ್ರೇಷ್ಠ ಜನ್ಮ ಪಡೆದು ಇಲ್ಲಿ ಭಗವಂತನಿಗೆ ಮೋಸ ಮಾಡುತ್ತಿದ್ದೇವೆ. ದೇವರನ್ನು ಪೂಜಿಸುವುದು, ಸ್ಮರಿಸುವುದು, ಧ್ಯಾನಿಸುವುದನ್ನು ಬಿಟ್ಟು ಉಳಿದೆಲ್ಲವನ್ನೂ ಮಾಡುತ್ತಿದ್ದೇವೆ. ನಿಮ್ಮ ಕೆಲಸ ಪ್ರಾಮಾಣಿಕವಾಗಿ ಮಾಡಿದರೆ ನೂರು ಪಟ್ಟು ಹೆಚ್ಚಿನ ಫಲ ಸಿಗುತ್ತದೆ. ನಿನ್ನ ಮೇಲೆ ನಿನಗೆ ನಂಬಿಕೆ ಇಲ್ಲ, ನಿಷ್ಠೇ ಇಲ್ಲ, ಕೆಲಸದಲ್ಲಿ ಪ್ರಾಮಾಣಿಕತೆ ಇಲ್ಲದಿದ್ದರೆ ಎಷ್ಟು ದೊಡ್ಡ ದೇವಾಲಯ ಕಟ್ಟಿದರೂ ವ್ಯರ್ಥವಾದಂತೆ ಎಂದರು.
ನೆಮ್ಮದಿ -ಆರೋಗ್ಯ ಇರುವವರೇ ಜಗತ್ತಿನ ನಿಜವಾದ ಶ್ರೀಮಂತರು. ಅವೆರಡೂ ಅಂಗಡಿಯಲ್ಲಿ ಸಿಗುವ ವಸ್ತುವಲ್ಲ, ನಾವು ಸಂಪಾದನೆ ಮಾಡುವಂತಹ ಕ್ರಿಯೆ. ಅದು ಭಗವಂತನ ಕೃಪಾದೃಷ್ಟ್ಟಿ ಇದ್ದರೆ ಮಾತ್ರ ಸಾಧ್ಯವಾಗುತ್ತದೆ. ಅವು ನಮಗೆ ಬರಬೇಕೆಂದರೆ ಭಗವಂತನ ಕಡೆ ಮುಖ ಮಾಡಬೇಕು ಎಂದು ತಿಳಿಸಿದರು.
ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ವಕೀಲ ಕೆ.ವಿ.ಶಂಕರಪ್ಪ ಮಾತನಾಡಿ, ಮಕ್ಕಳಿಗೆ ಸಂಸ್ಕಾರ ಮುಖ್ಯ, ಪಾಲಕರು ಮಕ್ಕಳಿಗೆ ನೀಡಿದ ಸಂಸ್ಕಾರ ಶಾಶ್ವತ ಹೊರತು, ಸಂಪತ್ತು ಶಾಶ್ವತವಲ್ಲ. ತಾಯಂದಿರು ಮಕ್ಕಳಿಗೆ ಸಮಾಜ ಮುಖಿ ಸಂಸ್ಕಾರ ಕಲಿಸಿ, ಪ್ರಕೃತಿಗೆ ಮಕ್ಕಳನ್ನು ಪರಿಚಯಿಸಿದಾಗಲೇ ಉತ್ತಮ ಸಮಾಜ ನಿಮಾರ್ಣ ಮಾಡಲು ಸಾಧ್ಯ ಎಂದರು.
24 ಎಂಬಿಎಲ್ 2
ಮುಳಬಾಗಿಲು ತಾಲೂಕು ಪೊಂಬರಹಳ್ಳಿಯಲ್ಲಿ ಶ್ರೀ ಬೃಂದಾವನ ವರದರಾಜ ಸ್ವಾಮಿ ದೇವಾಲಯದ ವಿಮಾನ ಗೋಪುರ ಶಿಲಾ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಶ್ರೀ ನಂಜಾವಧೂತ ಸ್ವಾಮೀಜಿ ಮಾತನಾಡಿದರು. ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ವಕೀಲ ಕೆ.ವಿ.ಶಂಕರಪ್ಪ, ಉಚ್ಛ ನ್ಯಾಯಾಲಯದ ವಕೀಲ, ಶ್ರೀ ಬೃಂದಾವನ ವರದಾಜ ಸ್ವಾಮಿ ಟ್ರಸ್ಟ್ ಕಾರ್ಯದರ್ಶಿ ಪಿ.ಎಂ.ನಾರಾಯಣಸ್ವಾಮಿ ಇದ್ದರು.