ಸದಾಶಿವ ಆಯೋಗದ ವರದಿ ಜಾರಿಗೆ ಪಕ್ಷ ಬದ್ಧ

17-12-Shiva-3
ರಾಯಚೂರಿನ ವಾಲ್ಕಾಟ್ ಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಭಾನುವಾರ ರಾತ್ರಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಸಚಿವ ಕೆ.ಎಚ್.ಮುನಿಯಪ್ಪ ಉದ್ಘಾಟಿಸಿದರು. ಸಚಿವರಾದ ಆರ್.ಬಿ.ತಿಮ್ಮಾಪುರೆ, ಎನ್.ಎಸ್.ಬೋಸರಾಜು, ಶಾಸಕರಾದ ಹಂಪಯ್ಯ ನಾಯಕ, ಚನ್ನಾರೆಡ್ಡಿ ಪಾಟೀಲ್ ತನ್ನೂರ, ಮಾಜಿ ಸಚಿವ ಎಚ್.ಆಂಜಿನೇಯ ಉಪಸ್ಥಿತರಿದ್ದರು.
Published on

ರಾಯಚೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಶೀಘ್ರ ಸದನದಲ್ಲಿ ಮಂಡಿಸಿ ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಸ್ಥಳೀಯ ವಾಲ್ಕಾಟ್ ಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಬಿಜೆಪಿ ನಾಯಕರು ಸಮುದಾಯದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಮೇಲೆ ಜನರು ವಿಶ್ವಾಸ ಇಡಬೇಕು ಎಂದರು.
ಬಿಜೆಪಿಯ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸದನದಲ್ಲಿ ಮೀಸಲಾತಿ ವರ್ಗೀಕರಣ ವಿಷಯ ನ್ಯಾಯಾಲಯದಲ್ಲಿದ್ದು, ವರ್ಗೀಕರಣ ಮಾಡುವ ವಿಷಯ ಸರ್ಕಾರದ ಮುಂದಿಲ್ಲ ಎಂದು ಸದನದಲ್ಲಿ ಹೇಳುತ್ತಾರೆ. ಆದರೆ ರಾಜ್ಯದ ಬಿಜೆಪಿ ನಾಯಕರು ನಾವು ವರ್ಗೀಕರಣ ಮಾಡುತ್ತೇವೆ ಎಂದು ಹೇಳುತ್ತಾರೆ.
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯ ಅಭಿವೃದ್ಧಿಗಾಗಿ ಶೇ.24.1ರಷ್ಟು ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಯಾವುದೇ ಕಾರಣಕ್ಕೆ ಪರಿಶಿಷ್ಟರಿಗಾಗಿ ಮೀಸಲಿಟ್ಟ 35 ಸಾವಿರ ಕೋಟಿ ರೂ. ಅನುದಾನವನ್ನು ಬೇರೆ ಕೆಲಸಕ್ಕೆ ಬಳಕೆ ಮಾಡಲು ಬಿಡುವುದಿಲ್ಲ.
ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಈಡೇರಿಸಿದೆ. ಅದರಂತೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ ಎಂದು ತಿಳಿಸಿದರು.
ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರೆ ಮಾತನಾಡಿ, ಪರಿಶಿಷ್ಠ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಅನುದಾನವನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ನಮ್ಮ ಸರ್ಕಾರ 7ಡಿ ಕಾಯ್ದೆ ಜಾರಿ ಮಾಡಿ ಅನುದಾನವನ್ನು ಸಮರ್ಪಕವಾಗಿ ಬಳಕೆ ಮುಂದಾಗಿದೆ.
ಬಿಜೆಪಿ ನಾಯಕರು ನಾಟಕವಾಡಿ ಜನರನ್ನು ಮೋಸಗೊಳಿಸುತ್ತಾರೆ. ಸದಾಶಿವ ಆಯೋಗದ ವರದಿ ಜಾರಿಯನ್ನು ಹೇಳಿದಂತೆ ಜಾರಿ ಮಾಡುತ್ತೇವೆ. ಮಾದಿಗರು ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ರಾಜಕೀಯ, ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರೆ, ಎನ್.ಎಸ್.ಬೋಸರಾಜರನ್ನು ಜಿಲ್ಲಾ ಕಾಂಗ್ರೆಸ್‌ನಿಂದ ಸನ್ಮಾನಿಸಿ, ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕರಾದ ಹಂಪಯ್ಯ ನಾಯಕ, ಚನ್ನಾರೆಡ್ಡಿ ಪಾಟೀಲ್ ತನ್ನೂರ, ಮಾಜಿ ಸಚಿವ ಎಚ್.ಆಂಜಿನೇಯ, ನಗರಸಭೆ ಸದಸ್ಯ ಜಯಣ್ಣ, ಮುಖಂಡರಾದ ರಾಮಣ್ಣ ಇರಬಗೇರಾ, ಸೈಯದ್ ಶಾಲಂ, ನಾಗವೇಣಿ ಪಾಟೀಲ್, ಬಾಲಸ್ವಾಮಿ ಕೊಡ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net