ಯತ್ನಾಳರಿಂದಾಗಿಯೇ ಇತರೆ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹೊಡೆತ, ಬಿಜೆಪಿ ಅಲ್ಪಸಂಖ್ಯಾತ ವಿರೋಧಿಯಲ್ಲ, ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹಾಗೆ ಹೇಳಿದ್ದೇಕೆ?

GURULINGAPPA ANGADI PRESS MEET
ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ಸಾಬು ಮಾಶ್ಯಾಳ, ಮಹೇಂದ್ರಕುಮಾರ ನಾಯಿಕ, ಈರಣ್ಣ ರಾವೂರ, ವಿಜಯಕುಮಾರ ಜೋಶಿ ಇದ್ದಾರೆ.
Published on

ವಿಜಯಪುರ: ‘ಬಿಜೆಪಿ ಅಲ್ಪಸಂಖ್ಯಾತ ವಿರೋಧಿಯಲ್ಲ, ಯತ್ನಾಳರಿಂದಾಗಿ ಇತರೆ ಕ್ಷೇತ್ರಗಳಲ್ಲಿರುವ ಬಿಜೆಪಿ ಅಭ್ಯರ್ಥಿಗಳಿಗೂ ಹೊಡೆತ ಬಿದ್ದಿದೆ, ದೇಶಭಕ್ತ ಮುಸ್ಲಿಂರಿಗೆ ಬಿಜೆಪಿಯಲ್ಲಿ ಅವಕಾಶ ಇದೆ, ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಮುಸ್ಲಿಂರಿಗೆ ಟಿಕೆಟ್ ನೀಡಬೇಕೆಂಬುದು ನನ್ನ ಆಶಯ ಮತ್ತು ಯೋಚನೆಯೂ ಇದೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಹೇಳಿದರು.

ಬಿಜೆಪಿ ಎಂದೂ ಅಲ್ಪಸಂಖ್ಯಾತ ವಿರೋಧಿಯಲ್ಲ, ಹಾಗೊಂದು ವೇಳೆ ವಿರೋಧಿಯಾಗಿದ್ದರೆ ಅಟಲ್‌ಬಿಹಾರಿ ವಾಜಪೇಯಿ ಅವಧಿಯಲ್ಲಿ ಎಪಿಜೆ ಅಬ್ದುಲ್‌ಕಲಾಂ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡುತ್ತಿರಲಿಲ್ಲ, ಬಿಜೆಪಿ ದೇಶಭಕ್ತರ ಪಕ್ಷ ಹೀಗಾಗಿ ದೇಶ ಭಕ್ತಿ ಇರುವ ಮುಸ್ಲಿಂರಿಗೆ ಬಿಜೆಪಿಯಲ್ಲಿ ಅವಕಾಶವಿದೆ ಆದರೆ ದೇಶ ವಿರೋಧಿ ಯಾರೇ ಇದ್ದರೂ ಅವಕಾಶ ಇಲ್ಲವೆಂದು ಬುಧವಾರ ಪಕ್ಷದ ಕಚೇರಿಯಲ್ಲಿ ಅವರು ಸುದ್ದಿಗೋಷ್ಠಿ ನಡೆಸಿದರು.

ವಿಜಯಪುರ ನಗರ ಕ್ಷೇತ್ರದಲ್ಲಿ ಯತ್ನಾಳರು ತಮ್ಮ ಗೆಲುವಿಗಾಗಿ ಹಿಂದು-ಮುಸ್ಲಿಂರಲ್ಲಿ ಒಡೆಕುಂಟು ಮಾಡಿದರು. ಏಕೆಂದರೆ ಕಾಂಗ್ರೆಸ್‌ನಿಂದ ಮುಸ್ಲಿಂ ವ್ಯಕ್ತಿಗೆ ಟಿಕೆಟ್ ನೀಡಿರುವ ಕಾರಣವೂ ಇರಬಹುದು. ಇತ್ತೀಚೆಗೆ ರಾಜಕೀಯ ವೇಗವಾಗಿ ಬೆಳೆಯುತ್ತಿದ್ದು ಗೆಲುವಿಗಾಗಿ ಜಾತಿ-ಧರ್ಮಾಧಾರಿತ ಮತ ಕೇಳುವ ಪ್ರಕ್ರಿಯೆ ನಡೆದಿದೆ. ಹೀಗಾಗಿ ನಗರ ಕ್ಷೇತ್ರದಲ್ಲಿ ಧರ್ಮಾಧಾರಿತ ರಾಜಕಾರಣ ನಡೆಯಿತು. ಯತ್ನಾಳರ ಈ ಮುಸ್ಲಿಂ ವಿರೋಧಿ ಹೇಳಿಕೆಯಿಂದ ಇತರೆ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ಹೊಡೆತವಂತೂ ಬಿದ್ದಿದೆ ಎಂದರು.

ಬಿಜೆಪಿ ಅಲ್ಪಸಂಖ್ಯಾತ ಘಟಕಕ್ಕೆ ಶೀಘ್ರದಲ್ಲೇ ನೇಮಕ ಮಾಡಿಕೊಳ್ಳಲಾಗುವುದು. ಈ ಮುಂಚೆ ಮುಸ್ಲಿಂ ವ್ಯಕ್ತಿಯನ್ನೇ ಆ ಘಟಕಕ್ಕೆ ನೇಮಕ ಮಾಡಲಾಗಿತ್ತು. ಕೆಲವರು ತಾವಾಗಿಯೇ ಬಿಟ್ಟು ಹೋದರು. ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮುಸ್ಲಿಂರಿಗೂ ಟಿಕೆಟ್ ನೀಡಲಾಗುವುದು. ನಾನಂತೂ ಜಾತ್ಯತೀತವಾಗಿದ್ದು ದೇಶಭಕ್ತರ ತಂಡ ಕಟ್ಟಿಕೊಂಡು ಪಕ್ಷ ಮುನ್ನಡೆಸುತ್ತೇನೆಂದು ಅಂಗಡಿ ಪ್ರತಿಕ್ರಿಯಿಸಿದರು.

ಯತ್ನಾಳರಿಗೆ ಹೆದರುವ ಪ್ರಶ್ನೆಯೇ ಇಲ್ಲ

ಪ್ರಧಾನಿ ನರೇಂದ್ರ ಮೋದಿ ಅವರ 11 ವರ್ಷದ ಸಾಧನೆ ಹೇಳಿಕೊಳ್ಳಲು ಮತ್ತು ಮುಂಬರುವ ಜಿಪಂ, ತಾಪಂ ಚುನಾವಣೆ ಹಿನ್ನೆಲೆ ಪಕ್ಷ ಸಂಘಟನೆಗಾಗಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆ.2 ರಂದು ವಿಜಯಪುರಕ್ಕೆ ಬರುವವರಿದ್ದರು. ಆದರೆ, ಜೆ.ಪಿ. ನಡ್ಡಾ ಅವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಅನಿವಾರ್ಯ ಕಾರಣಗಳಿಂದಾಗಿ ಪ್ರವಾಸ ಮುಂದೂಡಲಾಗಿದೆ ಎಂದು ಗುರುಲಿಂಗಪ್ಪ ಅಂಗಡಿ ತಿಳಿಸಿದರು.

ಈಗಾಗಲೇ ಬಿ.ವೈ. ವಿಜಯೇಂದ್ರ ಅವರ ಆಗಮಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆ ಗಮನಿಸಿದ್ದೇನೆ. ಹೀಗಾಗಿ ಮಾಹಿತಿ ರವಾನಿಸುವುದು ಅನಿವಾರ್ಯವಾಗಿದೆ. ವಿಜಯೇಂದ್ರ ಅವರ ಪ್ರವಾಸ ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದೆ ವಿನಃ ಯಾರದ್ದೇ ಹೆದರಿಕೆಯಿಂದಲ್ಲ ಎಂದು ಪ್ರತಿಕ್ರಿಯಿಸಿದರು.

ಮುಖಂಡರಾದ ಸಾಬು ಮಾಶ್ಯಾಳ, ಮಹೇಂದ್ರಕುಮಾರ ನಾಯಿಕ, ಈರಣ್ಣ ರಾವೂರ, ವಿಜಯಕುಮಾರ ಜೋಶಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net