ವೈಭವಯುತ ಜಂಬೂ ಸವಾರಿ ಸಜ್ಜಾದ ಅರಮನೆ ನಗರಿ

mysore
Published on

ಮೈಸೂರು; ನಾಡಹಬ್ಬದ ಪ್ರಮುಖ ಆಕರ್ಷಣೆ ವಿಜಯದಶಮಿಯಂದು ನಡೆಯಲಿರುವ ಆಕರ್ಷಕ ಜಂಬೂಬೂಸವಾರಿ ಮೆರವಣಿಗೆ. ಈಗಾಗಲೇ ಸಾಕಷ್ಟು ಸಿದ್ಧತೆಗಳೊಂದಿಗೆ ವೈಭವೋಪೇತವಾಗಿ ಕಂಗೊಳಿಸುತ್ತಿರುವ ಅರಮನೆ ನಗರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಶ್ರೀಚಾಮುಂಡೇಶ್ವರಿ ವಿಗ್ರಹವನ್ನು ಹೊತ್ತು ‘ಅಭಿಮನ್ಯು’ ಹೆಜ್ಜೆ ಹಾಕಲಿದ್ದಾನೆ. ಈ ಮೂಲಕ ಆರನೇ ಬಾರಿಗೆ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಲಿದ್ದಾನೆ. ಅಭಿಮನ್ಯುವಿಗೆ ‘ಕಾವೇರಿ’ ಮತ್ತು ‘ರೂಪಾ’ ಅಕ್ಕಪಕ್ಕದಲ್ಲಿ ಕುಮ್ಕಿ ಆನೆಗಳಾಗಿ ಸಾಗಲಿವೆ.

ಜಂಬೂಸವಾರಿ ಮೆರವಣಿಗೆಯಲ್ಲಿ ಗಜಪಡೆಯ ಎಲ್ಲ ಆನೆಗಳು ಭಾಗವಹಿಸಲಿವೆ. ನಿಶಾನೆ ಆನೆಯಾಗಿ ಧನಂಜಯ, ನೌಪತ್ ಆನೆಯಾಗಿ ಗೋಪಿಯನ್ನು ಆಯ್ಕೆ ಮಾಡಲಾಗಿದೆ. ಇಡೀ ಮೆರವಣಿಗೆಯನ್ನು ಧನಂಜಯ ಮುನ್ನಡೆಸಿದರೆ, ಹಿಂದೆ ಗೋಪಿ ಸಾಗಲಿದೆ. ಬಳಿಕ ಸಾಲಾನೆಯ ಮೊದಲ ತಂಡದಲ್ಲಿ ಮಹೇಂದ್ರ, ಶ್ರೀಕಂಠ, ಲಕ್ಷ್ಮೀ ಆನೆ ಬರಲಿವೆ. 2ನೇ ತಂಡದಲ್ಲಿ ಕಂಜನ್, ಭೀಮ, ಏಕಲವ್ಯ ಸಾಗಿದರೆ 3ನೇ ತಂಡದಲ್ಲಿ ಪ್ರಶಾಂತ, ಸುಗ್ರೀವ, ಹೇಮಾವತಿ ಆನೆಗಳು ಬರಲಿವೆ. ಕೊನೆಯಲ್ಲಿ ಅಂಬಾರಿ ಹೊತ್ತು ಅಭಿಮನ್ಯು ಬಂದರೆ ಜತೆಗೆ ಕಾವೇರಿ ಮತ್ತು ರೂಪಾ ಆನೆಗಳು ಇರಲಿವೆ. ಆದರೆ, ರಾಜವಂಶಸ್ಥರ ಖಾಸಗಿ ದರ್ಬಾರ್ ಸೇರಿ ಧಾರ್ವಿುಕ ಆಚರಣೆಗಳ ಮುಹೂರ್ತ ಬದಲಾಗಿ, ಸಮಯದಲ್ಲಿ ಏರುಪೇರಾದರೆ ಜಂಬೂ ಮೆರವಣಿಗೆಯಿಂದ ಕೆಲ ಆನೆಗಳು ಹೊರಗುಳಿಯುವ ಸಾಧ್ಯತೆ ಇದೆ.

ಅಂತಿಮ ಹಂತದ ತಾಲೀಮು: ಜಂಬೂಸವಾರಿಯನ್ನು ಯಶಸ್ವಿಗೊಳಿಸಲು ಅಂತಿಮ ಹಂತದ ತಾಲೀಮು ನಡೆದಿದೆ. ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ಸಮಯದಲ್ಲಿ ಸಿಡಿಸುವ ಕುಶಾಲತೋಪಿಗೆ ಆನೆ, ಕುದುರೆ, ಹಸುಗಳು ಬೆದರದಂತೆ ಮಾಡಲು ಮೂರು ಹಂತದಲ್ಲಿ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಿದ್ದು, ಶಬ್ದಕ್ಕೆ ಒಗ್ಗಿಕೊಳ್ಳುವಂತೆ ಮಾಡಲಾಗಿದೆ. ಗಣ್ಯರು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಲು ವೇದಿಕೆ ಸಿದ್ಧಪಡಿಸಿದ್ದು, ಎರಡು ಬಾರಿ ಪುರ್ಷ್ಪಾಚನೆ ಮಾಡುವ ತಾಲೀಮು ಪೂರ್ಣಗೊಂಡಿದೆ. ಪೊಲೀಸ್, ಎನ್​ಸಿಸಿ, ಹೋಂಗಾರ್ಡ್, ಸೇವಾದಳ, ಕಲಾತಂಡಗಳು ಸೇರಿ ಇನ್ನಿತರ ತಂಡಗಳ ಪಥಸಂಚಲನ ತಾಲೀಮು ಕೂಡ ನಡೆಸಲಾಗಿದೆ.

ಪೊಲೀಸ್ ಬಿಗಿ ಬಂದೋಬಸ್ತ್: ನಾಡಿನ ವಿವಿಧೆಡೆಯಿಂದ ಲಕ್ಷಾಂತರ ಜನರು ಜಂಜೂಸವಾರಿ ವೀಕ್ಷಣೆಗೆ ಆಗಮಿಸುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎರಡು ಹಂತದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸಿರುವ 6184 ಅಧಿಕಾರಿ, ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಐವರು ಎಸ್ಪಿ, 30 ಡಿವೈಎಸ್ಪಿ, 40 ಇನ್ಸ್​ಪೆಕ್ಟರ್, 35 ಕೆಎಸ್​ಆರ್​ಪಿ ತುಕಡಿ, 15 ಸಿಆರ್ ತುಕಡಿ, 29 ಎಎಸ್ಸಿ ತಂಡ, 1 ಆರ್​ಎಎಫ್ ಹಾಗೂ 1700 ಹೋಮ್ ಗಾರ್ಡ್​ಗಳನ್ನು ನಿಯೋಜಿಸಲಾಗಿದೆ.

ಮೈನವಿರೇಳಿಸಲಿದೆ ಪಂಜಿನ ಕವಾಯತು: ಮೈನವಿರೇಳಿಸುವ ಪಂಜಿನ ಕವಾಯತು (ಟಾರ್ಚ್​ಲೈಟ್ ಪರೇಡ್) ಸಮಾರಂಭಕ್ಕಾಗಿ ಬನ್ನಿಮಂಟಪದಲ್ಲಿ ತಯಾರಿ ಮಾಡಿಕೊಳ್ಳಲಾಗಿದೆ. ಪಂಜಿನ ಕವಾಯತು ಗುರುವಾರ ರಾತ್ರಿ 7ಕ್ಕೆ ಆರಂಭವಾಗಲಿದೆ. ಡ್ರೋನ್​ಗಳ ಮಾಯಾಜಾಲ, ವರ್ಣರಂಜಿತ ಲೇಸರ್ ಶೋ, ಆಕರ್ಷಕ ಟೆಂಟ್ ಪೆಗ್ಗಿಂಗ್, ಸಾಂಸ್ಕೃತಿಕ ಕಾರ್ಯಕ್ರಮ, ಕರ್ನಾಟಕ ಪೊಲೀಸ್ ಇಲಾಖೆಯ ವರ್ಣರಂಜಿತ ಪಂಜಿನ ಕವಾಯತು ಸೇರಿ ನಾನಾ ಕಾರ್ಯಕ್ರಮಗಳು ನಡೆಯಲಿವೆ. ಪಂಜಿನ ಕವಾಯತಿನಲ್ಲಿ ವಿವಿಧ ತಂಡಗಳಿಂದ ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಗೌರವ ವಂದನೆ ಸ್ಪೀಕರಿಸಲಿದ್ದಾರೆ. ಇದರೊಂದಿಗೆ ದಸರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

60 ಸ್ತಬ್ಧಚಿತ್ರಗಳು ಭಾಗಿ

ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ‘ಹೆಜ್ಜೆ ಗುರುತು’ ಗಳು ಅನಾವರಣಗೊಳ್ಳಲಿದೆ. ಜಂಬೂಸವಾರಿ ಅ.2ರ ಗಾಂಧಿ ಜಯಂತಿಂದೇ ನಡೆಯಲಿರುವ ಹಿನ್ನೆಲೆಯಲ್ಲಿ ಗಾಂಧೀಜಿಯನ್ನು ನೆನೆಯುವ ದೃಷ್ಟಿಯಿಂದ ಗಾಂಧಿ ಭೇಟಿ ಕೊಟ್ಟಿದ್ದ ಅಥವಾ ತಂಗಿದ್ದ ಸ್ಥಳ, ಘಟನೆಗಳು, ಐತಿಹಾಸಿಕ ಯಾತ್ರೆ, ಸಭೆ ಸಮಾರಂಭವನ್ನು ಬಿಂಬಿಸುವ ಸ್ತಬ್ಧಚಿತ್ರಗಳ ಈ ಬಾರಿ ಗಮನ ಸೆಳೆಯಲಿವೆ. ಜತೆಗೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳು, ಧಾರ್ವಿುಕ ಸ್ಥಳಗಳು, ಎಲ್ಲ ಜಿಲ್ಲೆಗಳ ಐತಿಹಾಸಿಕ ಮತ್ತು ಪ್ರಾಕೃತಿಕ ತಾಣಗಳನ್ನು ಪರಿಚಿಸುವ ಹಲವು ಸ್ತಬ್ಧಚಿತ್ರಗಳು ಜನಾಕರ್ಷಿಸಲಿವೆ. ಆಯಾ ಜಿಲ್ಲೆಯ ಜಿಐ (ಜಿಯಾಗ್ರಫಿಕಲ್ ಇಂಡಿಕೇಷನ್) ಟ್ಯಾಗ್ ಇರುವ ವಸ್ತುಗಳ ಬಗ್ಗೆ ತಿಳಿಸುವ ಹಾಗೂ ಕನ್ನಡ ನಾಡು-ನುಡಿ, ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರಗಳು ಗಮನ ಸೆಳೆಯಲಿವೆ. ಜಂಜೂಸವಾರಿ ಮೆರವಣಿಗೆಯಲ್ಲಿ 60ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಭಾಗಿಯಾಗಲಿವೆ. ಜತೆಗೆ 50ಕ್ಕೂ ಹೆಚ್ಚು ಕಲಾ ತಂಡಗಳು ಸಾಗಲಿದ್ದು, ಕಲಾವಿದರು ಅಂತಿಮ ತಾಲೀಮು ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net