

ಮುಂಡರಗಿ: ತಾಲೂಕಿನ ತುಂಗಭದ್ರಾ ನದಿ ಪಾತ್ರದ ಶಿಂಗಟಾಲೂರು, ಹಮ್ಮಿಗಿ ಮತ್ತಿತರ ಕಡೆಗಳಲ್ಲಿ ಭಾನುವಾರ ಗಾಳಿ, ಮಳೆಯಿಂದಾಗಿ ಕಟಾವು ಹಂತದಲ್ಲಿದ್ದ ಭತ್ತ ನೆಲಕಚ್ಚಿದೆ.
ನದಿ ಪಾತ್ರದ ಹಲವು ಭಾಗಗಳಲ್ಲಿ ಕೆಲವರು ಭತ್ತದ ಕಟಾವು ಆರಂಭಿಸಿದ್ದಾರೆ. ಇನ್ನೇನು ಕಟಾವು ಮಾಡಬೇಕೆನ್ನುವ ಹಂತದಲ್ಲಿ ಇನ್ನೂ ಅನೇಕ ರೈತರಿದ್ದಾರೆ. ಉತ್ತಮವಾದ ಭತ್ತದ ಕಾಳು ಹಿಡಿದಿದ್ದ ಭತ್ತ ಗಾಳಿ ಮಳೆಗೆ ನೆಲಕಚ್ಚಿದೆ.
ಗಾಳಿ, ಮಳೆಗೆ ನೆಲಕಚ್ಚುವುದರಿಂದ ಕಾಳು ಉದುರುವುದು, ಕಪ್ಪಾಗುವುದು ಹೆಚ್ಚಲಿದೆ. ಇದರಿಂದ ರೈತರು ತೀವ್ರ ಹಾನಿ, ನಷ್ಟ ಅನುಭವಿಸುವಂತಾಗುತ್ತದೆ.
ನೆಲಕಚ್ಚಿದ ಭತ್ತದ ದರ ಕಡಿಮೆಯಾಗುವ ಆತಂಕವೂ ರೈತರನ್ನು ಕಾಡುತ್ತಿದೆ. ಕಟಾವು ಹಂತದಲ್ಲಿದ್ದ ಭತ್ತದ ಬೆಳೆಯು ಗಾಳಿ, ಮಳೆಗೆ ನೆಲಕಚ್ಚಿದೆ. ಹಿಂದೆ ಸುರಿದ ಮಳೆಗೂ ಹಾನಿಯಾಗಿತ್ತು. ಒಂದು ಎಕರೆಗೆ 40 ಸಾವಿರ ರೂ. ಖರ್ಚು ಮಾಡಿ ಕಷ್ಟಪಟ್ಟು ಬೆಳೆದ ಬೆಳೆ ಹಾನಿಯಾಗಿದೆ ಎಂದು ಶಿಂಗಟಾಲೂರು ರೈತ ಮಲ್ಲಪ್ಪ ಮಲ್ಲಿಕೇರಿ ತಿಳಿಸಿದ್ದಾರೆ.