

ಹಂದಿಗುಂದ: ರಾಯಬಾಗ ತಾಲೂಕಿನ ದೇವಾಪುರಹಟ್ಟಿ ಹಾಗೂ ಕಟಕಬಾವಿ ಗ್ರಾಮದ ಘಟಪ್ರಭಾ ಎಡದಂಡೆ ಕಾಲುವೆ ಪಕ್ಕದಲ್ಲಿರುವ ರೈತರ ಕೊಳವೆಬಾವಿ, ತೆರೆದ ಬಾವಿ ಹಾಗೂ ಟ್ರಾನ್ಸ್‌ಫಾರ್ಮ್‌ಗಳನ್ನು ತೆರವುಗೊಳಿಸುತ್ತಿರುವ ಅಧಿಕಾರಿಗಳ ನಡೆ ಖಂಡಿಸಿ ಕಂಕಣವಾಡಿ ಪಟ್ಟಟಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ನಿಪ್ಪಾಣಿ-ಮುಧೋಳ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಮಾತನಾಡಿ, ಕಳೆದ ಐದಾರು ದಿನಗಳ ಹಿಂದೆ ರೈತರ ಜಮೀನಿನಲ್ಲಿರುವ 20 ಕೊಳವಿಬಾವಿ, 20 ತೆರೆದ ಬಾವಿಗಳು ಹಾಗೂ ಟ್ರಾನ್ಸ್‌ಫಾರ್ಮ್ ಹಾಗೂ ಟಿಸಿ ತೆರವುಗೊಳಿಸಿದ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಸುರೇಶ ಮುಂಜೆ ಮಾತನಾಡಿ, ಈ ಕುರಿತು ಎರಡು ದಿನಗಳಲ್ಲಿ ಜಿಲ್ಲಾಡಳಿತ ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ನೀರಾವರಿ ಅಧಿಕಾರಿ ಮತ್ತು ರೈತರ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.
ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ಜಗದೀಶ ಹೂಡೆದಮಣಿ, ರೈತ ಸಂಘದ ಶಶಿಕಾಂತ ಗುರೂಜಿ, ಮಲ್ಲಪ್ಪ ಅಂಗಡಿ, ಮಹಾದೇವ ಹೊಳಕರ, ಹಾಲಪ್ಪ ಹುಕ್ಕೇರಿ, ಮಲ್ಲಪ್ಪ ಅಂಗಡಿ, ರಮೇಶ ಕಲ್ಲಾರ, ಮಲ್ಲಿಕಾರ್ಜುನ ಖಾನಗೌಡ, ಮಹಾದೇವ ಹೊಳಕರ, ಸುರೇಶ ಹೊಸಪೇಟಿ, ಕಲ್ಲನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ನಿಂಗಪ್ಪ ಪಕಾಂಡಿ ಇತರರು ಇದ್ದರು.