

ಗಂಗೊಳ್ಳಿ: ಕಳೆದ ಮಳೆಗಾಲದಲ್ಲಿ ಹಾನಿಗೊಂಡಿದ್ದ ಮರವಂತೆ ಔಟ್‌ಡೋರ್ ಬಂದರು ಈ ಬಾರಿ ಮತ್ತೆ ಅಪಾಯಕ್ಕೆ ಸಿಲುಕಿದ್ದು, ಅಬ್ಬರಿಸುತ್ತಿರುವ ಕಡಲಿನ ಹೊಡೆತದಿಂದ ಬಂದರು ಜರ್ಜರಿತಗೊಂಡಿದೆ.
ಕೇರಳ ವಾದರಿಯ ಮರವಂತೆ ಔಟ್‌ಡೋರ್ ಬಂದರಿನಲ್ಲಿ ಕಡಲಿನ ರಕ್ಕಸ ಗಾತ್ರದ ಅಲೆಗಳು ಬಂದರಿನ ಬ್ರೇಕ್ ವಾಟರ್ ತಡೆಗೋಡೆಗೆ ಬಡಿಯುತ್ತಿದ್ದು, ತಡೆಗೋಡೆಯ ಟೆಟ್ರಾಪಾಡ್ ಮತ್ತು ಕಲ್ಲುಗಳು ಜಾರಿ ಕಡಲು ಸೇರುತ್ತಿವೆ. ಬಂದರು ಪ್ರದೇಶದಲ್ಲಿ ಯಾಂತ್ರೀಕೃತ ನಾಡದೋಣಿ ನಿಲುಗಡೆ ಜಾಗವನ್ನು ಸಮುದ್ರ ಕಬಳಿಸಲಾರಂಭಿಸಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಬಂದರಿನ ಒಳಾಂಗಣದಲ್ಲಿ ತೀವ್ರ ಕಡಲ್ಕೊರೆತ ಕಾಣಿಸಿಕೊಂಡಿದೆ.
ಬಂದರಿನಲ್ಲಿ ಅಳವಡಿಸಲಾಗಿದ್ದ ಹೈವಾಸ್ಟ್ ದೀಪದ ಕಂಬಗಳು ಕೊಚ್ಚಿ ಹೋಗುವ ಭೀತಿ ಎದುರಾಗಿದ್ದು, ಬಂದರಿನಲ್ಲಿ ಅಳವಡಿಸಲಾಗಿರುವ ಇಂಟರ್‌ಲಾಕ್ ಕೂಡ ಕಡಲ ಒಡಲು ಸೇರುವ ಭೀತಿ ಎದುರಾಗಿದೆ. ನಾಡದೋಣಿ ನಿಲುಗಡೆ ಸ್ಥಳದಲ್ಲಿ ಕಡಲ್ಕೊರೆತ ತಡೆಯಲು ತಾತ್ಕಾಲಿಕ ಅಳವಡಿಸಲಾಗಿದ್ದ ಮರಳು ಚೀಲ ಹಾಗೂ ಟೆಟ್ರಾಪೋಡ್ ಅಲ್ಲಲ್ಲಿ ಕುಸಿದು ಬಿದ್ದಿದೆ.
2013ರಲ್ಲಿ ಆರಂಭಗೊಂಡಿದ್ದ ಮರವಂತೆ ಔಟ್‌ಡೋರ್ ಬಂದರು ಕಾಮಗಾರಿ ಈವರೆಗೆ ಪೂರ್ಣಗೊಂಡಿಲ್ಲ. ಈವರೆಗೆ ನಡೆದಿರುವ 55 ಕೋಟಿ ರೂ. ವೆಚ್ಚದ ಕಾಮಗಾರಿಯ ಶೇ.50ರಷ್ಟು ಸಮುದ್ರ ಪಾಲಾಗಿದೆ. ಕಾಮಗಾರಿ ಸ್ಥಗಿತಗೊಂಡು 4 ವರ್ಷ ಕಳೆದಿದ್ದು, ಕಡಲಿನ ಆರ್ಭಟಕ್ಕೆ ಬಂದರು ಕಾಮಗಾರಿ ನೆಲಕಚ್ಚುವ ಪರಿಸ್ಥಿತಿ ಬಂದಿದೆ.
ಪರಿಸ್ಥಿತಿ ಹೀಗೆ ಮುಂದುವರಿದರೆ ಔಟ್‌ಡೋರ್ ಬಂದರು ಮರೆಯಾಗುವ ಸಾಧ್ಯತೆ ಇದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಬಂದರು ಸುರಕ್ಷತೆಗೆ ಗಮನ ಹರಿಸಬೇಕು. ಶ್ರೀಧರ ಖಾರ್ವಿ, ಮೀನುಗಾರರು, ಮರವಂತೆ https://www.vijayavani.net/gantihole-demands-appointment-of-permanent-teachers https://www.vijayavani.net/ban-on-mechanized-fishing