

ಮಡಿಕೇರಿ: ಪಾಲೂರ್ ಕೊಡವಾಮೆ ಕೂಟ ಏರ್ಪಡಿಸಿದ್ದ ಪಾಲೂರು ಗ್ರಾಮದ ವಾರ್ಷಿಕ ಊರೊರ್ಮೆ ಸಮಾರಂಭ ಸಂಭ್ರಮದಿಂದ ಜರುಗಿತು.
೧೭ನೇ ವರ್ಷದ ಕಾರ್ಯಕ್ರಮದಲ್ಲಿ ಪಾಲೂರಿನಲ್ಲಿ ನೆಲೆಸಿರುವ ಕೊಡವ ಕುಟುಂಬದ ನೂರಾರು ಸದಸ್ಯರು ಭಾಗಿಯಾಗಿದ್ದರು. ಮೇಪಾಡಂಡ ವೇಣು ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರಾಮದ ಹಿರಿಯ ಕಾಫಿ ಬೆಳೆಗಾರರಾದ ಬೊಳ್ಳಿಯಂಡ ಎಂ.ಪಳಂಗಪ್ಪ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಮಾತನಾಡಿ, ಕೊಡವ ಜನಾಂಗದ ಅಭಿವೃದ್ಧಿಗೆ ಗ್ರಾಮ ಮಟ್ಟದಲ್ಲಿ ಇಂತಹ ಕಾರ್ಯಕ್ರಮದ ಅವಶ್ಯಕತೆ ಇದೆ. ಕೊಡವರ ಆಚಾರ ವಿಚಾರಗಳ ಬಗ್ಗೆ ಯುವಜನತೆಗೆ ಅರಿವು ಮೂಡಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಗ್ರಾಮಸ್ಥರಿಗೆ ಹಮ್ಮಿಕೊಂಡಿದ್ದ ಮನೋರಂಜನಾ ಸ್ಪರ್ಧೆಗೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪರವರು ಗುಂಡು ಹಾರಿಸುವ ಮೂಲಕ ಉದ್ಘಾಟಿಸಿದರು. ನಂತರ ಹಲವು ಮನೋರಂಜನಾ ಸ್ಪರ್ಧೆ ನಡೆಯಿತು. ಕೊಡವ ವಾಲಗ ಆಟ್ ಸ್ಪರ್ಧೆಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಕೂಡಿ ಒಬ್ಬರಿಗೊಬ್ಬರು ಸವಾಲು ಹಾಕುತ್ತಾ ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕಿದರು. ಕೊಡವಾಮೆ ಕೂಟದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಕಿರುಚಿತ್ರ, ಸಾಕ್ಷ್ಯಚಿತ್ರ ನಿರ್ದೇಶಕ ಮಂದನೆರವಂಡ ಯುಗ ದೇವಯ್ಯರವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಮಂದನೆರವಂಡ ಸಂಜು, ಉಪಾಧ್ಯಕ್ಷ ಪೊಡುವಂಡ ಜಯ ಪೊನ್ನಪ್ಪ, ಉಪಾಧ್ಯಕ್ಷೆ ನೆರವಂಡ ಚೆಸ್ಲಿ ದೇವಯ್ಯ, ಸದಸ್ಯರಾದ ಪೈಕೇರ ನಂದ, ಚೆರುವಾಳಂಡ ದಿವಿಜ, ನೆರವಂಡ ಸಭಿ, ಮಂದನೆರವಂಡ ಲೋಕೇಶ್, ಮೇಪಾಡಂಡ ವಿಜು, ನೆರವಂಡ ಶ್ವೇತಾ ಉಪಸ್ಥಿತರಿದ್ದರು.