

ಮಂಡ್ಯ : ಸಮಗ್ರ ಮಾನವತಾವಾದದ ಪ್ರತಿಪಾದಕ ಮತ್ತು ಭಾರತೀಯ ಜನ ಸಂಘದ ರಾಜಕೀಯ ಸಿದ್ಧಾಂತದ ಕರಡು ರಚನೆ ಮುಂಚೂಣಿ ನಾಯಕ ದೀನದಯಾಳ್ ಉಪಾಧ್ಯಾಯ ಎಂದು ಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್‌ಕುಮಾರ್ ತಿಳಿಸಿದರು.
ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ದೀನದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಪ್ರಸ್ತುತ ದೇಶದ ಹೆಗ್ಗಳಿಕೆಯನ್ನು ವಿಶ್ವದೆಲ್ಲಡೆಗೆ ಪಸರಿಸುತ್ತಿರುವ ಬಿಜೆಪಿಯ ಮೂಲ ಪಕ್ಷ ಭಾರತೀಯ ಜನ ಸಂಘವಾಗಿದ್ದು, ಇದರ ಮೂಲ ಹುಟ್ಟಿಗೆ ಕಾರಣರಾದವರಲ್ಲಿ ಉಪಾಧ್ಯಾಯ ಅವರು ಬಹು ಮುಖ್ಯ ಪಾತ್ರ ವಹಿಸಿದ್ದರು ಎಂದರು.
ಉಪಾಧ್ಯಾಯ ಅವರು 1940 ರ ದಶಕದಲ್ಲಿ ಹಿಂದುತ್ವದ ಪುನರುಜ್ಜೀವನದ ಆದರ್ಶಗಳನ್ನು ಹರಡಲು ರಾಷ್ಟ್ರಧರ್ಮ ಎಂಬ ಮಾಸಿಕ ಪ್ರಕಟಣೆಯನ್ನು ಪ್ರಾರಂಭಿಸಿದರು. ಜನಸಂಘದ ಅಧಿಕೃತ ರಾಜಕೀಯ ಸಿದ್ಧಾಂತವಾದ ಸಮಗ್ರ ಮಾನವತಾವಾದದ ಕರಡು ರಚನೆಗೆ ಹೆಸರುವಾಸಿಯಾಗಿದ್ದರು. ಕೆಲವು ಸಾಂಸ್ಕೃತಿಕ ರಾಷ್ಟ್ರೀಯತೆಯ ಮೌಲ್ಯಗಳು, ಎಲ್ಲ ವರ್ಗದ ಜನರ ಪ್ರಗತಿ ಹಾಗೂ ಸ್ವದೇಶಿ ಸ್ವಾವಲಂಬನೆಗೆ ಶ್ರಮಿಸಿದ್ದರು. ಇಂದಿನ ಯುವ ಪೀಳಿಗೆ ದೀನದಯಾಳರ ದೇಶಾಭಿಮಾನವನ್ನು ಸ್ಮರಿಸುವುದರ ಜತೆಗೆ ಅವರ ದೇಶ ಪ್ರೇಮದ ಆದರ್ಶ ಗುಣಗಳನ್ನು ಮೈಗೂಡಿಕೊಳ್ಳಬೇಕೆಂದು ಕರೆ ನೀಡಿದರು.
ಗ್ರಾಮದ ಮುಖಂಡರಾದ ಸತೀಶ್, ಪ್ರಭುಸ್ವಾಮಿ, ಸಂಜಯ್, ಮಹದೇವಸ್ವಾಮಿ, ಚೇತನ್, ಮಹೇಂದ್ರ, ಅಭಿಷೇಕ್, ರಾಜೇಶ್ ಸೇರಿದಂತೆ ಇತರರಿದ್ದರು.