

ಮೈಸೂರು: ಪ್ರಜಾಪ್ರಭುತ್ವ ಪ್ರಮುಖ ನಾಲ್ಕು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ದಾರಿ ತಪ್ಪಿದೆ. ಈ ವ್ಯವಸ್ಥೆಯನ್ನು ಲಂಚಮುಕ್ತ, ದೋಷ ಮುಕ್ತಗೊಳಿಸಲು ಯುವಜನರು ಹೋರಾಟ ನಡೆಸುವ ಅವಶ್ಯಕತೆ ಇದೆ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.
ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಗುರುವಾರ ದಲಿತ ವಿದ್ಯಾರ್ಥಿ ಒಕ್ಕೂಟ, ಎಚ್‌ಎಂಸಿಬಿ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ‘ಭವಿಷ್ಯದಲ್ಲಿ ಪ್ರಜಾಪ್ರಭುತ್ವದ ರಕ್ಷಣೆ ಜವಾಬ್ದಾರಿ ಯುವ ಶಕ್ತಿ ಕೈಯಲ್ಲಿ’ ಮುಕ್ತ ಸಂವಾದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಧೀಶರ ಮನೆಯಲ್ಲಿ ಕೋಟ್ಯಂತರ ರೂ. ಹಣ ದೊರೆತ್ತಿದೆ. ಜೈಲಿನಲ್ಲಿದ್ದು ಬಂದವರು ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಈ ಹಿಂದೆ ಜನರೇ ರಾಜಕಾರಣಿಗಳಿಗೆ ಹಣ ನೀಡಿ ಚುನಾವಣೆಯಲ್ಲಿ ಗೆಲ್ಲಿಸುತ್ತಿದ್ದರು. ಆದರೆ, ಪ್ರಸ್ತುತ ಬ್ರೀಫ್‌ಕೇಸ್ ತರದಿದ್ದರೆ ಊರಿನ ಒಳಗಡೆ ಸೇರಿಸದ ಪರಿಸ್ಥಿತಿ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರತಿಯೊಂದು ಸಮುದಾಯದ ಅಭಿವೃದ್ಧಿಗೆ ಜಾತಿ ಜನಗಣತಿಯ ಅವಶ್ಯಕತೆ ಇದೆ. ಈ ಗಣತಿಯನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ. 1931ರ ಬಳಿಕ ದೇಶದಲ್ಲಿ ಜಾತಿ ಗಣತಿಯೇ ನಡೆದಿಲ್ಲ. ನಿಖರವಾದ ಅಂಕಿಅಂಶಗಳು ಇಲ್ಲದೇ ಯೋಜನೆ ರೂಪಿಸಲು ಸಾಧ್ಯವಿಲ್ಲ. ಮೀಸಲಾತಿ ಹಂಚಿಕೆಯೂ ಕಷ್ಟವಾಗುತ್ತದೆ. ಇಂದಿಗೂ ಎಲ್ಲ ಜಾತಿಯ ಶಾಸಕರು ವಿಧಾನಸೌಧದದಲ್ಲಿ ಇಲ್ಲ. ಶೇ.20 ಜಾತಿಯ ಜನರು ಮಾತ್ರ ಶಾಸಕರು, ಸಂಸದರಾಗಿದ್ದಾರೆ. ಹಾಗಾದರೆ ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಅನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಯೂ ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿಲುವು. ಮೋದಿ ಅವರು ಸಂದರ್ಭಯೋಚಿತ ನಿಲುವು ಕೈಗೊಂಡಿದ್ದಾರೆ. ನಮ್ಮ ಸೈನಿಕರು ಸಮಾಜದ ಮೇಲೆ ಬಾಂಬ್ ಹಾಕಿಲ್ಲ. ದೇಶಕ್ಕೆ ಧರ್ಮಕ್ಕೆ ಅನಾಹುತ ಬಂದಾಗ ಗಟ್ಟಿ ನಿರ್ಧಾರ ಮಾಡಬೇಕಾಗುತ್ತದೆ ಎಂದು ಹೇಳಿದರು.
ಚಿಂತಕ ಶಿವಸುಂದರ್, ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಕೃಷ್ಣ ಹೊಂಬಾಳ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಬಿ.ಆರ್.ರಂಗಸ್ವಾಮಿ, ಚಿಂತಕ ಶಿವಸುಂದರ್, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ನಟರಾಜ್ ಶಿವಣ್ಣ, ವಿಜಯ ಐಎಎಸ್ ಅಕಾಡೆಮಿ ಮುಖ್ಯಸ್ಥ ಅನಂತರಾಜ್ ಸೂರ್ಯ, ಆಮ್ ಆದ್ಮಿ ಪಾರ್ಟಿ ನಾಯಕಿ ಮಾಲವಿಕಾ ಗುಬ್ಬಿವಾಣಿ, ದಲಿತ ವಿದ್ಯಾರ್ಥಿ ಒಕ್ಕೂಟದ ರವಿ, ರಂಗಯ್ಯ, ಮಹೇಶ್‌ಕುಮಾರ್, ನವೀನ್ ಹಾಗೂ ಇತರರು ಇದ್ದರು.