ಜಿಲ್ಲಾಡಳಿತದ ಕ್ರಮ ಖಂಡಿಸಿ 27 ಖಾಸಗಿ ಬಡಾವಣೆಗಳ ಸಂಘಟನೆ ಪ್ರತಿಭಟನೆಗೆ ನಿರ್ಧಾರ

21
Published on

ಮೈಸೂರು: ದಶಕಗಳಿಂದ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿರುವ ಜಿಲ್ಲಾಡಳಿತ ಕ್ರಮ ಖಂಡಿಸಿ ಜುಲೈ 15ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟ ನಿರ್ಧರಿಸಿದೆ.
ನಗರ ಹೊರವರ್ತುಲ ರಸ್ತೆಯಿಂದ ಪೂರ್ವಭಾಗದಲ್ಲಿರುವ 27 ಖಾಸಗಿ ಬಡಾವಣೆಗಳ ಸಂಘಟನೆಗಳು ಒಟ್ಟಾಗಿ ಸೇರಿ ರಚಿಸಲಾಗಿರುವ ಮೈಸೂರು ಪೂರ್ವ ವಲಯ ಬಡಾವಣೆಗಳ ಒಕ್ಕೂಟದ ಆಶ್ರಯದಲ್ಲಿ ಶನಿವಾರ ಮಾನಸಿನಗರ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಎಲ್ಲ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.
ಅಂದು ಬೆಳಗ್ಗೆ 9.30ಕ್ಕೆ ದೇವೇಗೌಡ ವೃತ್ತದ ಸಮೀಪವಿರುವ ಕೆಎಂಎಫ್‌ಬಡಾವಣೆಯ ಉದ್ಯಾನದಲ್ಲಿ ಸೇರಿ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಮೂಲಕ ಮೆರವಣಿಗೆ ಸಾಗಲು ನಿರ್ಧರಿಸಲಾಯಿತು.
ಪ್ರತಿಭಟನೆಯಲ್ಲಿ ಪ್ರತಿಯೊಂದು ಬಡಾವಣೆಯವರು ಭಾಗವಹಿಸಬೇಕು, ಮಹಿಳೆಯರಿಂದ ಖಾಲಿ ಕೊಡಗಳ ಪ್ರದರ್ಶನ ಆಗಬೇಕು, ಆಯಾ ಬಡಾವಣೆಗಳ ಸಮೀಪವೇ ಪ್ರಮುಖ ರಸ್ತೆಯಲ್ಲಿ ಅಲ್ಲಲ್ಲಿ ರಸ್ತೆ ತಡೆ ಮಾಡಬೇಕು, ಪ್ರತಿಯೊಬ್ಬರೂ ತಮ್ಮೊಂದಿಗೆ ಕನಿಷ್ಠ ಇಬ್ಬರನ್ನು ಕರೆತರಬೇಕು. ಪ್ರತಿಭಟನೆ ವೇಳೆ ಬಿತ್ತಿಪತ್ರದ ಪ್ರದರ್ಶನ ಆಗಬೇಕು. ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ನಿರ್ಣಯಿಸಲಾಯಿತು.
ಬಡಾವಣೆಯ ಸಮಸ್ಯೆ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಬಡಾವಣೆಗಳಿಗೆ ಅಧಿಕಾರಿಗಳನ್ನು ಕರೆಸುವ ಕೆಲಸ ಆಗಬೇಕು. ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿಸದೆ ಶಾಶ್ವತ ಪರಿಹಾರ ನೀಡಬೇಕು ಎಂದು ಒತ್ತಾಯಿಸಲು ತೀರ್ಮಾನಿಸಲಾಯಿತು.
ಪೂರ್ವ ವಲಯದ 27 ಬಡಾವಣೆಗಳಲ್ಲಿ ರಸ್ತೆ, ಕುಡಿಯಲು ಕಾವೇರಿ ನೀರು, ಒಳಚರಂಡಿ, ಸಮರ್ಪಕ ವಿದ್ಯುತ್ ಸರಬರಾಜು ಸೇರಿದಂತೆ ಅಗತ್ಯ ಮೂಲ ಸೌಕರ್ಯಕ್ಕಾಗಿ ಪ್ರಬಲವಾಗಿ ಒತ್ತಡ ತರಬೇಕು ಎಂದು ಆಗ್ರಹಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಎ.ಎಂ.ಬಾಬು ಮಾತನಾಡಿ, ಲೇಔಟ್ ಡೆವಲಪರ್‌ಗಳಿಂದ ಒಂದಷ್ಟು ಸಮಸ್ಯೆ ಸೃಷ್ಟಿಯಾದರೆ, ಅಧಿಕಾರಿಗಳಿಂದ ಒಂದಷ್ಟು ಸಮಸ್ಯೆ ಸೃಷ್ಟಿಯಾಗಿದೆ. ಇದರ ಕೆಟ್ಟ ಫಲ ಅನುಭವಿಸುತ್ತಿರುವವರು ಬಡಾವಣೆಯ ಜನ. ಮುಂದಿನ ಮಕ್ಕಳಿಗೆ ನಾವು ಉತ್ತಮ ವಾತಾವರಣ ಬಿಟ್ಟುಕೊಡದಿದ್ದಲ್ಲಿ ಅವರು ನಮಗೆ ಶಾಪ ಹಾಕುತ್ತಾರೆ. ನಾವು ಮೌನವಾಗಿದ್ದಷ್ಟು ಸರ್ಕಾರಿ ವ್ಯವಸ್ಥೆ ನಮ್ಮ ಮೇಲೆ ಸವಾರಿ ಮಾಡುತ್ತದೆ. ನಾವು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ನೀರಿನ ಮಲಿನದಿಂದ ಜನರ ಆರೋಗ್ಯ ಹಾಳಾಗುತ್ತಿದೆ. ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. 250 ಟಿಎಂಸಿ ನೀರು ಇದ್ದರೂ, ಕುಡಿಯುವ ನೀರಿಗಾಗಿ ಮೈಸೂರಿನ ಜನ ಪರದಾಡುವಂತಾಗಿದೆ. ವ್ಯವಸ್ಥಿತ ನೀರಿನ ಜಾಲ ಇಲ್ಲ. ಮೈಸೂರಿನ ಜನರ ನೀರಿನ ದಾಹ ತಣಿಸಲು ಕೇವಲ ಎರಡು ಟಿಎಂಸಿ ನೀರು ಸಾಕು. ಆದರೆ ರಿಂಗ್ ರಸ್ತೆ ಆಚೆಗೆ ನೀರಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವುದು ಅನಿವಾರ್ಯ ಎಂದರು.
ಮುಡಾದವರು ಒಳಚರಂಡಿ ವ್ಯವಸ್ಥೆಯನ್ನು ಒಂದಕ್ಕೊಂದು ಲಿಂಕ್ ಮಾಡಿ, ಅದನ್ನು ಶುದ್ಧೀಕರಣ ಮಾಡಿ ಮರುಬಳಕೆ ಮಾಡುವ ಯೋಜನೆ ಮಾಡಿದಲ್ಲಿ ಸಮಸ್ಯೆ ಭಾಗಶಃ ನಿವಾರಣೆ ಆಗಲಿದೆ. ಈ ಮೂಲಕ ಮಲಿನಗೊಂಡಿರುವ ಕೆರೆ ಕಟ್ಟೆಗಳನ್ನು ಶುಚಿಯಾಗಿ ಇಟ್ಟುಕೊಳ್ಳಬಹುದು ಎಂದು ಸಲಹೆ ನೀಡಿದರು.
ಎಲ್ಲರಿಗೂ ಸಾಮಾಜಿಕ ಜವಾಬ್ದಾರಿ ಬೇಕು. ಮುಂದಿನ ಪೀಳಿಗೆಗಾಗಿ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು. ಕುಡಿಯುವ ನೀರು ಹಾಗೂ ಒಳಚರಂಡಿ ಸಮಸ್ಯೆ ನಿವಾರಣೆ ತಕ್ಷಣದ ಆದ್ಯತೆ ಆಗಬೇಕು. ಇದನ್ನು ಅರಿತು ನಾವು ಎಚ್ಚರಿಕೆಯಿಂದ ಹೆಜ್ಜೆ ಇಡದಿದ್ದರೆ ಅಧಿಕಾರಿಗಳು ಕೆಲಸ ಮಾಡುವುದಿಲ್ಲ ಎಂದು ತಿಳಿಸಿದರು.
ಒಕ್ಕೂಟದ ಅಡಿಯಲ್ಲಿನ 27 ಬಡಾವಣೆಗಳಲ್ಲಿ ವಿದ್ಯುತ್ ಸಮಸ್ಯೆಯೂ ಮಿತಿಮೀರಿದೆ. ಸಾರಿಗೆ ಬಸ್ ವ್ಯವಸ್ಥೆ ಅದ್ವಾನ ಹೇಳತೀರದಾಗಿದೆ. ನೀರಿನ ಗಡಸುತನ ಮೇರೆ ಮೀರಿದ್ದು, ಕೆಲವೇ ದಿನಗಳ ಅಂತರದಲ್ಲಿ ಇಡೀ ಜನತೆ ಕಾಯಿಲೆಗಳಿಂದ ಬಳಲುವುದು ನಿಚ್ಚಳವಾಗಿದೆ. ಬಡಾವಣೆಯಲ್ಲಿರುವ ಅವೈಜ್ಞಾನಿಕ ರಸ್ತೆಯಿಂದಾಗಿ ಅಪಘಾತಗಳು ಹೆಚ್ಚಾಗಿವೆ. ಈ ಬಗ್ಗೆ ಪೊಲೀಸ್ ಇಲಾಖೆಯ ಗಮನ ಸೆಳೆಯಬೇಕು ಎಂದು ಕೋರಿದರು.
ಡಿಸಿ, ನೀರಾವರಿ, ಮುಡಾ, ಜಿಲ್ಲಾ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಣ್ಣ ನೀರಾವರಿ, ಸೆಸ್ಕ್, ರಸ್ತೆ ಸಾರಿಗೆ ಸೇರಿದಂತೆ ಎಲ್ಲ ಇಲಾಖೆಗೂ ಪತ್ರ ಬರೆದು ಗಮನ ಸೆಳೆಯಲಾಗಿದೆ. ಅವರ ಮೇಲೆ ಮತ್ತಷ್ಟು ಒತ್ತಡ ಹೇರಬೇಕಾದ ಅನಿವಾರ್ಯತೆ ಇದೆ. ನಾವು ತೆರಿಗೆದಾರರು, ನಮ್ಮ ಮೂಲಸೌಕರ್ಯ ಕೇಳುವುದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು.
ಒಕ್ಕೂಟದ ಉಪಾಧ್ಯಕ್ಷ ಎಂ.ಎಚ್. ಚೆಲುವೇಗೌಡ, ಕಾರ್ಯದರ್ಶಿ ಎಲ್. ಪ್ರಕಾಶ್, ಸಹಕಾರ್ಯದರ್ಶಿ ಎಂ.ಎಲ್. ಅರುಣ್, ಸಂಘಟನಾ ಕಾರ್ಯದರ್ಶಿ ಬೊಮ್ಮೇಗೌಡ, ಸಹ ಸಂಘಟನಾ ಕಾರ್ಯದರ್ಶಿ ಡಿ. ಕೃಷ್ಣೇಗೌಡ, ಖಜಾಂಚಿ ನರಸಿಂಹೇಗೌಡ, ಮಾಧ್ಯಮ ಕಾರ್ಯದರ್ಶಿ ಎಚ್.ಎಸ್.ರಾಘವೇಂದ್ರ ಭಟ್ ಸೇರಿದಂತೆ ಒಕ್ಕೂಟದ ನಿರ್ದೇಶಕರು, 27 ಖಾಸಗಿ ಬಡಾವಣೆಗಳ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net