ಅರಣ್ಯ ಇಲಾಖೆ ಆದೇಶ ಅವೈಜ್ಞಾನಿಕ

21sirsi1
Published on

ಶಿರಸಿ: ಪ್ರಸಕ್ತ ವರ್ಷ ರಾಜ್ಯದಲ್ಲಿ ಹತ್ತು ಸಾವಿರ ಎಕರೆ ಅರಣ್ಯ ಭೂಮಿ ಸಾಗುವಳಿ ಅತಿಕ್ರಮಣ ಪ್ರದೇಶ ಒಕ್ಕಲೆಬ್ಬಿಸಿ ವಶಪಡಿಸಿಕೊಳ್ಳಲು, ಅರಣ್ಯ ಇಲಾಖೆ ಗುರಿಹೊಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 1450 ಎಕರೆಯಷ್ಟು ಅರಣ್ಯವಾಸಿಗಳ ಒಕ್ಕಲೆಬ್ಬ್ಬಿಸಲು ಇಲಾಖೆ ನಿರ್ಧರಿಸಿದೆ. ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ವಿಚಾರಣಾ ಹಂತದಲ್ಲಿ ಇರುವುದರಿಂದ, ಅರಣ್ಯ ಇಲಾಖೆಯ ಆದೇಶದ ಪ್ರಕಾರ ಒಕ್ಕಲೆಬ್ಬಿಸುವ ಪ್ರಕ್ರಿಯೆ ಅಸಾಧ್ಯ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಇಲಾಖೆಯ ಅವೈಜ್ಞಾನಿಕ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಅವರು ಲಿಖಿತ ಆದೇಶ ಹೊರಡಿಸಿದ್ದು, ಒಕ್ಕಲೆಬ್ಬಿಸುವ ಪ್ರಕ್ರಿಯೆಯು ಪ್ರಮಖ ಕಾರ್ಯ ಕ್ಷಮತೆ ಸೂಚಕಗಳು( ಕೆಪಿಎಲೆಸ್) ಮೇಲ್ವಿಚಾರಣೆಯಲ್ಲಿ ಅಧೀನ ಅಧಿಕಾರಿಗಳು ಅರಣ್ಯ ಭೂಮಿ ಇಂದ ಒಕ್ಕಲೆಬ್ಬಿಸುವ ಕಟ್ಟುನಿಟ್ಟಿನ ನಿಯಮ ಪಾಲಿಸಬೇಕೆಂದು ಸೂಚಿಸಿದ್ದಾರೆ. ಪರಿಸರ ಸಮತೋಲನ ಕಾಪಾಡುವ ಉದ್ದೇಶದಿಂದ ಅರಣ್ಯ ಅತಿಕ್ರಮಣದ ಪ್ರದೇಶ ವಶಪಡಿಸಿಕೊಳ್ಳುವುದು ಅತಿ ಅವಶ್ಯ. ಅದರಂತೆ ಒಕ್ಕಲೆಬ್ಬಿಸಲು ಶಿಸ್ತಿನ ಕ್ರಮ ಜರುಗಿಸುವಂತೆ ನಿರ್ದೇಶಿಸಿ, ವಿವಿಧ ಅರಣ್ಯ ಸರ್ಕಲ್‌ಗಳಿಗೆ ಪ್ರಸಕ್ತ ವರ್ಷ 2025-26 ಸಾಲಿನಲ್ಲಿ ಒಕ್ಕಲೆಬ್ಬಿಸುವ ಗುರಿಯನ್ನು ಸಹಿತ ನಮೂದಿಸಿ ಆದೇಶ ಪ್ರಕಟಿಸಿದ್ದಾರೆ ಎಂದಿದ್ದಾರೆ.

ಶಿವಮೊಗ್ಗದಲ್ಲಿ ಅತಿ ಹೆಚ್ಚು :

ರಾಜ್ಯದಲ್ಲಿ ಒಟ್ಟು ಒಕ್ಕಲೆಬ್ಬಿಸಲು ನಿಗದಿಗೊಳಿಸಲಾದ ಅಂಕಿಸಂಖ್ಯೆಯಲ್ಲಿ ಶಿವಮೊಗ್ಗ ವೃತ್ತದಲ್ಲಿ ಹೆಚ್ಚು ಅತಿಕ್ರಮಣ ಪ್ರದೇಶವಿದ್ದು, 79,560.7 ಎಕರೆ ಪ್ರದೇಶ ಗುರಿ ಹೊಂದಲಾಗಿದೆ. ಅದರಲ್ಲಿ ಪ್ರಸಕ್ತ 2025-26 ಸಾಲಿನಲ್ಲಿ 3650 ಎಕರೆ ಒಕ್ಕಲೆಬ್ಬಿಸಲು ಗುರಿ ಹೊಂದಿದೆ. ಉತ್ತರ ಕನ್ನಡದಲ್ಲಿ 28033.26 ಎಕರೆ ಅತಿಕ್ರಮಣ ಕ್ಷೇತ್ರವಿದ್ದು, ಅದರಲ್ಲಿ 1450 ಎಕರೆ ಪ್ರಸಕ್ತ ವರ್ಷ ಒಕ್ಕಲೆಬ್ಬಿಸಬೇಕೆಂಬ ಗುರಿ ಅರಣ್ಯ ಇಲಾಖೆಯ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ. ಇನ್ನುಳಿದ ಚಿಕ್ಕಮಂಗಳೂರು ಸರ್ಕಲ್ ಒಟ್ಟು 27,818 ಎಕರೆ ಅತಿಕ್ರಮಣ, ಅದರಲ್ಲಿ ಪ್ರಸಕ್ತ ವರ್ಷ ಒಕ್ಕಲೆಬ್ಬಿಸುವ ಕ್ಷೇತ್ರ 1250, ಬೆಂಗಳೂರು ಸರ್ಕಲ್ ಒಟ್ಟು ಅತಿಕ್ರಮಣ 15,070.7 ಎಕರೆ ಅದರಲ್ಲಿ 750 ಎಕರೆ ಪ್ರಸಕ್ತ ವರ್ಷ ಒಕ್ಕಲೆಬ್ಬಿಸುವಿಕೆ ಹಾಗೂ ಹಾಸನ ಸರ್ಕಲ್‌ನಲ್ಲಿ ಒಟ್ಟು ಅತಿಕ್ರಮಣ 13,710.8 ಎಕರೆ ಅತಿಕ್ರಮಣವಿದ್ದು, ಪ್ರಸಕ್ತ ವರ್ಷ 700 ಎಕರೆ ಒಕ್ಕಲೆಬ್ಬಿಸುವ ಗುರಿ ಹೊಂದಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net