

ಭದ್ರಾವತಿ: ಅನಾದಿ ಕಾಲದಿಂದಲೂ ಮಹಿಳೆ ಆಂತರಿಕ ಹಾಗೂ ಬಾಹ್ಯವಾಗಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಗೆ ತನ್ನದೇ ಆದ ಹಕ್ಕುಬಾಧ್ಯತೆಗಳಿದ್ದರೂ ವಂಚಿತಳಾಗಿಯೇ ಬದುಕುತ್ತಿರುವುದು ವಿಪರ್ಯಾಸ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ನಾಡೋಜ ಡಾ. ಗೊ.ರು.ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದರು.
ಜನ್ನಾಪುರ ಬಂಟರ ಭವನದಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಹಾಗೂ ತಾಲೂಕು ಶರಣ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲೆ, ಲಿಂ.ಲಕ್ಕಮ್ಮ ಮತ್ತು ಮಂಜಪ್ಪ ಸಂಸ್ಮರಣ ದತ್ತಿ ಕಾರ್ಯಕ್ರಮದಲ್ಲಿ ಮಹಿಳೆಯರ ಸಮಸ್ಯೆಗಳ ಕುರಿತು ಉಪನ್ಯಾಸ ನೀಡಿದರು.
ಮಹಿಳೆ ಪ್ರಾಕೃತಿಕ, ಕೌಟಂಬಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ನಾಲ್ಕು ಸಮಸ್ಯೆಗಳನ್ನು ಹುಟ್ಟಿನಿಂದಲೂ ಅನುಭವಿಸುತ್ತಿದ್ದಾಳೆ. ಗಂಡು ಮತ್ತು ಹೆಣ್ಣಿನ ನಡುವಿನ ಶಾರೀರಿಕ ಧೋರಣೆಗಳನ್ನು ಅಲ್ಲಗೆಳೆಯುವಂತಿಲ್ಲ. ಆದರೂ ಹೆಣ್ಣಿನ ವ್ಯಕ್ತಿತ್ವ ಹಾಗೂ ಪ್ರತಿಷ್ಠೆಯನ್ನು ಒಪ್ಪಿಕೊಳ್ಳದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಹತ್ತಿಕ್ಕುವ ಕೆಲಸ ನಿರಂತರ ನಡೆಯುತ್ತಲೇ ಇದೆ ಎಂದರು.
ಮಹಿಳೆಯರ ಉದ್ಧಾರ ಕೇವಲ ಕೃತಿಯಾಗಿದೆಯೇ ಹೊರತು ಶ್ರುತಿಯಾಗಿಲ್ಲ. ಸೀ ಪುರುಷರ ವ್ಯಕ್ತಿತ್ವದ ದರ್ಶನವಾಗುವುದು ಅವರ ದಾಂಪತ್ಯ ಜೀವನದಲ್ಲಿ ಎನ್ನುವುದು ಮಾತ್ರ ಸತ್ಯ. ಗೃಹ ಶಿಕ್ಷಣ ಕೊಟ್ಟ ನಾವು ಆಕೆಗೆ ಲೌಕಿಕ ಶಿಕ್ಷಣ ನೀಡಲಿಲ್ಲ. ಬಲವಂತದ ಮದುವೆ, ವರದಕ್ಷಿಣೆ, ದೇವದಾಸಿ ಪದ್ಧತಿ ನಡುವೆ ಆಕೆಯ ಸ್ವಂತ ಅನಿಸಿಕೆ, ಆಸೆ, ಆಕಾಂಕ್ಷೆಗಳಿಗೆ ಅವಕಾಶವಿಲ್ಲದೆ ಅನಾಥ ಪ್ರಜ್ಞೆ ಅನುಭವಿಸುವಂತಾಗಿದೆ. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆ ತನ್ನನ್ನು ಗುರುತಿಸಿಕೊಂಡರೂ 12ನೇ ಶತಮಾನದ ಶರಣೆಯರಲ್ಲಿದ್ದ ಗಟ್ಟಿತನ ಆಧುನಿಕ ಮಹಿಳೆಯರಲ್ಲಿ ಇಲ್ಲವಾಗಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಶ್ರುತಿ ವಸಂತಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗೆ ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅವರಿಗಿದ್ದ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತಿದೆ ಎಂದರು.
ಹೊನ್ನಾಳಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಡಾ. ಬಿ.ಜಿ.ಧನಂಜಯ ಮಾತನಾಡಿ, ಕಳೆದ ಮೂರು ದಶಕಗಳಿಂದ ಶರಣ ಸಾಹಿತ್ಯ ಪರಿಷತ್ತಿನ ಮೂಲಕ ನಾಡಿನ ಸಾಹಿತ್ಯಿಕ, ಸಾಂಸ್ಕೃತಿಕ ಪರಂಪರೆಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಕೊಂಡೊಯ್ಯವ ಕೆಲಸ ಗೊ.ರು.ಚನ್ನಬಸಪ್ಪ ಮಾಡುತ್ತಿದ್ದಾರೆ. ಕನ್ನಡ ನಾಡಿನ ಸಂಸ್ಕೃತಿ, ಜಾನಪದ ಕಲೆಗಳನ್ನು ಹಲವಾರು ಕೃತಿಗಳ ಮೂಲಕ ರಚಿಸಿ ಸಮಾಜಕ್ಕೆ ಉತ್ಕೃಷ್ಟ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಬಂಟರ ಸಂಘದ ತಾಲೂಕು ಅಧ್ಯಕ್ಷ ಜಿ.ದಿವಾಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎನ್.ಎಸ್.ಮಲ್ಲಿಕಾರ್ಜುನಯ್ಯ, ಎಚ್.ಎನ್.ಮಹಾರುದ್ರ, ಎಂ.ವಿರೂಪಾಕ್ಷಪ್ಪ. ರಾಜಶೇಖರಪ್ಪ, ನಂದಿನಿ ಮಲ್ಲಿಕಾರ್ಜುನ್, ಮಲ್ಲಿಕಾಂಬಾ ಇತರರಿದ್ದರು.
ಮಹಿಳೆ ತನ್ನ ಸಮಸ್ಯೆಗಳನ್ನು ತಾನೇ ಪರಿಹರಿಸಿಕೊಳ್ಳುವಂತಾಗಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ತಪ್ಪುಗಳನ್ನು ಪ್ರಶ್ನಿಸುವಂತಾಗಬೇಕು. ಪುರುಷರಂತೆ ಮಹಿಳೆಯರಿಗೂ ಸಮಾನ ವೇತನ ಸಿಗಬೇಕು. ಅದಕ್ಕೆಲ್ಲ ಸಮುದಾಯ ಶಿಕ್ಷಣದ ಅಗತ್ಯವಿದೆ.ಡಾ. ಗೊ.ರು.ಚನ್ನಬಸಪ್ಪಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ