ಅರಣ್ಯ ಇಲಾಖೆಯ ದಬ್ಬಾಳಿಕೆ ಸಹಿಸಲ್ಲ

C Narayana
Published on

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ

ಶ್ರೀನಿವಾಸಪುರ: ಅರಣ್ಯ ಇಲಾಖೆ ಅಧಿಕಾರಿಗಳು ಬಲಾಢ್ಯರನ್ನು ಬಿಟ್ಟು, ಬಡ ರೈತಾಪಿ ವರ್ಗದವರನ್ನು ಒಕ್ಕಲೆಬ್ಬಿಸುತ್ತಿದ್ದು, ಈ ಬಗ್ಗೆ ಬೆಳಗಾವಿ ಸುವರ್ಣ ಸೌಧದ ಅಧಿವೇಶನದಲ್ಲಿ ಚರ್ಚೆ ಮಾಡಿ ಜಿಲ್ಲಾ ಅರಣ್ಯಾಧಿಕಾರಿ ವಿರುದ್ಧ ಕ್ರಮಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ ಎಂದು ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ತಾಲೂಕಿನ ಪಾತಪಲ್ಲಿ ಚೌಡರೆಡ್ಡಿ ಮಾವಿನ ತೋಟಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ಜನರಿಂದ ಅಧಿಕಾರ ಪಡೆದು, ಜನರ ಮೇಲೆಯೇ ದೂಂಡಾವರ್ತನೆ ನಡೆಸುವ ಸರ್ಕಾರ ರಾಜ್ಯದಲ್ಲಿದ್ದು, ಇದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದರು.

ದೊಡ್ಡ ದೊಡ್ಡವರ 200-300 ಎಕರೆ ಜಮೀನು ಒತ್ತವರಿ ತೆರವುಗೊಳಿಸದೆ, ಸಣ್ಣ ಸಣ್ಣ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಸರಿಯೇ. ರಮೇಶ್‌ಕುವಾರ್ ಏನು ನಿರ್ಗತಿಕರಾ?, ಅವರು ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನೇಕೇ ತೆರವುಗೊಳಿಸುತ್ತಿಲ್ಲ ಎಂದು ಕಿಡಿಕಾರಿದರು.

ಸರ್ವೇ ನಂ.32, 33, 49ಗಳಲ್ಲಿ ವಾವಿನ ಮರ ಕಡಿದು ಹಾಕುತ್ತಿರುವುದು ಸರಿಯಲ್ಲ. ಈ ಭಾಗದಲ್ಲಿ 1,35,000 ಸಾವಿರ ಮರಗಳನ್ನು ಅರಣ್ಯ ಅಧಿಕಾರಿಗಳು ಕಡಿದು ಹಾಕಿದ್ದಾರೆ. ಮುಳಬಾಗಿಲ ತಾಲೂಕಿನಲ್ಲಿ ಸಹ ದೂಂಡಾವರ್ತನೆ ವಾಡಿ ಮಹಿಳೆಯರು, ಮಕ್ಕಳು ಎನ್ನದೇ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿದರು.

ಡಿಎಫ್‌ಒ ಖುದ್ದಾಗಿ ಕಾರಲ್ಲೇ ಸಾರಾಯಿ ತಂದು ಸಿಬ್ಬಂದಿಗೆ ಕುಡಿಸಿ, ಈ ರೀತಿ ಕಾರ್ಯಾಚರಣೆ ಮಾಡುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕೋರ್ಟ್ ಆದೇಶ ಧಿಕ್ಕರಿಸಿ ಅತಿಕ್ರಮ ಮಾಡುತ್ತಿದ್ದು, ಅಂತಹ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡುವವರೆಗೂ ನಾವು ಸುಮ್ಮನಿರಲ್ಲ ಎಂದರು.

ತಾಲೂಕು ಅಧ್ಯಕ್ಷ ರೋಣೂರು ಆರ್.ಎನ್.ಚಂದ್ರಶೇಖರ್, ಉಪಾಧ್ಯಕ್ಷ ನಾಗಭೂಷಣ್, ಮುಖಂಡರಾದ ಜೆಸಿಬಿ ಅಶೋಕ್, ಪಾಳ್ಯ ಗೋಪಾಲರೆಡ್ಡಿ ಇದ್ದರು.

ಕಾಂಗ್ರೆಸ್ ಇದ್ದಿದ್ದರೆ ಜನರ ಉಸಿರು ನಿಲ್ಲುತಿತ್ತು! ಮುಳಬಾಗಿಲು: ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವನ್ನು ವಿಶ್ವಕ್ಕೆ ಕಾಡಿದ ಕರೊನಾ ಸಾಂಕ್ರಾಮಿಕ ವ್ಯಾದಿಗೆ ಹೋಲಿಕೆ ವಾಡುವುದು ಬಾಲಿಶತನವಾಗುತ್ತದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರೊನಾ ವೇಳೆ ಆರ್‌ಟಿಪಿಸಿಅರ್‌ಗಾಗಿಯೇ ₹84 ಲಕ್ಷ, ಟೆಸ್ಟ್‌ಗೆ ₹500 ಕೋಟಿ ರೂ. ಹಗರಣ ನಡೆದಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ. ಕೋವಿಡ್ ಅಂದ್ರೆ ಡಿಸಿಎಂ ಡಿ.ಕೆ.ಶಿವಕುವಾರ್ ಅವರಿಗೆ ಗೊತ್ತಾ, ಅದು ಇಡೀ ಪ್ರಪಂಚಕ್ಕೆ ಕರೊನಾ ಬಂದಿತ್ತು. ಈ ಸಾಂಕ್ರಾಮಿಕವನ್ನು ದೇಶದಲ್ಲಿ ನರೇಂದ್ರ ಮೋದಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಆದರೆ, ಇಂದಿರಾಗಾಂಧಿ ರೀತಿ ಎಮರ್ಜೆನ್ಸಿ ಘೋಷಣೆ ಮಾಡಿಲ್ಲ. ಸೋನಿಯಾ, ರಾಹುಲ್ ಅಂತಹವರು ಇದ್ದಿದ್ದರೆ ನಮ್ಮೆಲ್ಲರ ಉಸಿರು ನಿಲ್ಲುತಿತ್ತು ಎಂದು ಅಣಕಿಸಿದರು.

ಹಗರಣ ತನಿಖೆಯಾಗಲಿ: ಮೈಸೂರಿನಲ್ಲಿ ರಾತ್ರೋರಾತ್ರಿ ನಿವೇಶನ ಕೊಟ್ಟಿದ್ದು, ಕಲಬುರಗಿಯಲ್ಲಿ ಖರ್ಗೆ ಅವರ ಜಮೀನು ವಾಪಸ್ ಮಾಡಿದ್ದು, ಎಲ್ಲವನ್ನು ಸಿಬಿಐ ತನಿಖೆಗೆ ಕೊಡಿ ಎಂದು ಒತ್ತಾಯ ವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net