

ಪ್ರಶಾಂತ ಭಾಗ್ವತ, ಉಡುಪಿ
ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ ಈಗ ಜಗತ್ತಿನ ಗಮನ ಸೆಳೆದಿದೆ. ಈಗ ಎಲ್ಲೆಲ್ಲೂ ಸಿಂಧೂರದ್ದೇ ಸದ್ದು-ಸುದ್ದಿ. ಆ ವಿಚಾರವೀಗ ಯಕ್ಷಗಾನ ರಂಗವನ್ನೂ ಪ್ರವೇಶಿಸಿದ್ದು, ಸಂಭಾಷಣೆಯ ದೃಶ್ಯ ವೈರಲ್ ಆಗಿದೆ.
ಉಡುಪಿ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಮೇಳಗಳಲ್ಲಿ ಒಂದಾದ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಿಂದ ಉಡುಪಿ ಹಾವಂಜೆಯಲ್ಲಿ ಇತ್ತೀಚೆಗೆ ನಡೆದ ನಂದೀಶ ಶೆಟ್ಟಿ ಬಿಲ್ಲಾಡಿ ವಿರಚಿತ ಮಾತೆ ಮಂದಾಕಿನಿ ಪ್ರಸಂಗವು ಸಿಂಧೂರದ ಮಹತ್ವ ಸಾರಿದೆ.
ಪ್ರಸಂಗದ ಕಥೆಯಲ್ಲಿ ಸಗರ ಚಕ್ರವರ್ತಿಯ ಮೊಮ್ಮಗನಾದ ಅಂಶುಮಂತನ ಪಾತ್ರಧಾರಿ, ಕಲಾವಿದ-ಪತ್ರಕರ್ತ ಸಂದೇಶ ಶೆಟ್ಟಿ ಆರ್ಡಿ ಎಂಬವರು ಕರಾಳದೈತ್ಯ (ರಾಘವೇಂದ್ರ ಉಳ್ಳೂರು)ನೊಂದಿಗೆ ಸಿಂಧೂರದ ಶ್ರೇಷ್ಠತೆ ಹಾಗೂ ಮಹತ್ವ ಸಾರಿದ ವ್ಯಾಖ್ಯಾನ ಯಕ್ಷಪ್ರೇಮಿಗಳ ಮನ ಸೆಳೆದಿದೆ. ಕಲಾವಿದನ ವಾಕ್ಚಾತುರ್ಯಕ್ಕೆ ವ್ಯಾಪಕ ಪ್ರಶಂಸೆಯೂ ವ್ಯಕ್ತವಾಗುತ್ತಿದೆ.
ಸನಾತನ ಸಿಂಧೂರಕ್ಕೆ ಎಷ್ಟು ಪ್ರಾಧಾನ್ಯತೆ ಇದೆಯೆಂದು ಕಲಾವಿದ ತಿಳಿಸಿದ ಮಾಹಿತಿ ಇಂತಿದೆ. ಹೇ ಕರಾಳದೈತ್ಯನೇ, ಈ ಮಾರ್ಗದಲ್ಲಿ ಸಾಗುವ ಜನರನ್ನು ಕೊಂದು ಅವರ ಮಾಂಸ ಭಕ್ಷಿಸಿ ಜನರಲ್ಲಿ ಭಯ ಹುಟ್ಟಿಸುತ್ತಿದ್ದೀಯ. ಹೀಗಾಗಿ ನೀನೊಬ್ಬ ಭಯೋತ್ಪಾದಕ. ಅನೇಕರನ್ನು ಕೊಂದು ಮಹಿಳೆಯರ ಸಿಂಧೂರ ಅಳಿಸುವಂತೆ ಮಾಡಿದ್ದೀಯ. ಸಿಂಧೂರದ ಮಹಿಮೆ ನಿನಗೆ ತಿಳಿಯದು. ಸಿಂಧೂರ ಧರಿಸಿ ಅಭಯ ಕೊಟ್ಟರೆ ಅದು ಅಭಯ ಸಿಂಧೂರ. ವಿಶ್ವಾಸ ತೋರಿದರೆ ಪ್ರೀತಿಯ ಸಿಂಧೂರ. ಹಣೆಯಲ್ಲಿ ಪುರುಷ ಧರಿಸಿದರೆ ಅದು ರಣ ಸಿಂಧೂರ. ಸಪ್ತಪದಿ ತುಳಿಯುವಾಗ ಪತ್ನಿಯ ಹಣೆಗಿಟ್ಟರೆ ಪ್ರತಿಜ್ಞಾ ಸಿಂಧೂರ. ಇದು ಕೇವಲ ಕೆಂಪು ಬಣ್ಣದ ಮಣ್ಣಲ್ಲ. ಶಿವನು ಮೂರನೇ ಕಣ್ಣು ಹೊರತೆಗೆದಾಗ ಬಂದಿದ್ದ ಅಗ್ನಿಜ್ವಾಲೆಗೆ ಸಮಾನ. ಇನ್ನು ಮಹಿಳೆಯರ ಸಿಂಧೂರ ಅಳಿಸಲು ನಾನು ಬಿಡುವುದಿಲ್ಲ. ನಿನಗೆ ಕ್ಷಮಾ ಸಿಂಧೂರವನ್ನಿಟ್ಟು ಜೀವಿಸಲು ಬಿಡುತ್ತೇನೆ. ಭಯೋತ್ಪಾದನೆ ಬಿಟ್ಟು ಒಳ್ಳೆಯವನಾಗು. ಇಲ್ಲ ನಾನು ತೊಟ್ಟ ರಣ ಸಿಂಧೂರದ ಅಗ್ನಿಜ್ವಾಲೆಗೆ ಸುಟ್ಟುಬೂದಿಯಾಗು. ಬಾ ಯುದ್ಧಕ್ಕೆ...
| ಸಂದೇಶ ಶೆಟ್ಟಿ ಆರ್ಡಿ. ಯಕ್ಷಗಾನ ಕಲಾವಿದಶ್ರೀಕ್ಷೇತ್ರ ಮಂದಾರ್ತಿಯ ಐದೂ ಮೇಳಗಳಲ್ಲಿ ಮಾತೆ ಮಂದಾಕಿನಿ ಪ್ರಸಂಗ ಪ್ರದರ್ಶನ ಮಾಡಲಾಗುತ್ತಿದೆ. ಪಾಕಿಸ್ತಾನದೊಂದಿಗೆ ಭಾರತ ಆಪರೇಷನ್ ಸಿಂಧೂರ ಹೆಸರಲ್ಲಿ ಯುದ್ಧ ಮಾಡಿದ್ದು, ಅದೇ ರೀತಿಯಲ್ಲಿ ಪ್ರಸಂಗದಲ್ಲಿ ರಾಕ್ಷಸನೊಂದಿಗೆ ಯುದ್ಧ ಮಾಡುವಾಗ ಸಿಂಧೂರದ ಮಹಿಮೆಯನ್ನು ಸಾಂದರ್ಭಿಕವಾಗಿ ಪ್ರಯೋಗಿಸಿದ್ದೆ. ಅದೀಗ ಅಪಾರ ಮೆಚ್ಚುಗೆ ಗಳಿಸುತ್ತಿದೆ.