

ಮಂಜುನಾಥರಾಜ್ ಅರಸ್ ಚಿಕ್ಕನಾಯಕನಹಳ್ಳಿ
ಕಟ್ಟಡದ ಸುತ್ತಮುತ್ತ ಬೆಳೆದಿರುವ ಗಿಡ&ಗಂಟಿ, ಸೊಳ್ಳೆಗಳೊಂದಿಗೆ ವಿಷಜಂತುಗಳ ಕಾಟ, ಮರಿಚೀಕೆಯಾದ ಸ್ವಚ್ಛತೆ, ಮೂಲಸೌಲಭ್ಯ ಕೊರೆತೆ.. ಹೀಗೆ ಸಾಲು ಸಾಲು ಸಮಸ್ಯೆಗಳಿಗೆ ಸಿಲುಕಿರುವ ಪಟ್ಟಣದ ಸರ್ಕಾರಿ ಆಸ್ಪತ್ರೆಯೇ ಅನಾರೋಗ್ಯ ಪೀಡಿತವಾದಂತಿದೆ.
ಹೌದು… ಆರೋಗ್ಯ ಸಮಸ್ಯೆ ಬಂದಾಗ ಆಸ್ಪತ್ರೆಗೆ ಹೋಗುವುದು ಸಹಜ. ಆದರೆ ಆರೋಗ್ಯವಂತರು ಆಸ್ಪತ್ರೆಗೆ ಭೇಟಿ ನೀಡಿದರೆ ಅಲ್ಲಿಂದಲೇ ರೋಗ ಹರಡುವ ವಾತಾವರಣ ನಿರ್ಮಾಣ ಆಗಿರುವುದು ಬೇಸರದ ಸಂಗತಿ.
ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಕೇವಲ 50 ಹಾಸಿಗೆಗಳ ಸಾಮರ್ಥ್ಯವಿದ್ದು, 100 ಹಾಸಿಗೆಗಳ ಅನುಮೋದನೆಗೆ ಕಾಯುತ್ತಿದೆ. ಈ ಹಿಂದೆಯೇ ಆಸ್ಪತ್ರೆಯನ್ನು 100 ಹಾಸಿಗೆಗೆ ಹೆಚ್ಚಿಸುವ ನಿಟ್ಟಿನಲ್ಲಿ ಮೇಲ್ಭಾಗದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಿಸಿದರೂ ಸರ್ಕಾರದಿಂದ ಅನುಮೋದನೆ, ಮೂಲ ಸೌಲಭ್ಯ ಕಲ್ಪಿಸದ ಕಾರಣ ತಾಲೂಕಿನ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ತಿಪಟೂರು, ತುಮಕೂರು ನಗರಗಳಿಗೆ ಅಲೆಯುವಂತಾಗಿದೆ.
ಪ್ರತಿದಿನ 400ರಿಂದ 500 ಜನ ಹೊರರೋಗಿಗಳು ಬಂದು ಹೋಗುತ್ತಾರೆ. 35ರಿಂದ 40 ಜನ ಒಳರೋಗಿಗಳಿದ್ದು, ಸಮರ್ಪಕ ವೈದ್ಯಕಿಯ ಸೌಲಭ್ಯ ಮತ್ತು ವೈದ್ಯರಿಲ್ಲದೆ ಸಮಸ್ಯೆಯಾಗುತ್ತಿದೆ.
ಆಸ್ಪತ್ರೆಯಲ್ಲಿ ಸ್ವಚ್ಛತೆ ಮರಿಚೀಕೆಯಾಗಿದೆ. ಶೌಚಗೃಹಗಳು ಬಳಸಲಾಗದಂತಹ ಸ್ಥಿತಿಯಲ್ಲಿವೆ. ಇನ್ನು ಆಸ್ಪತ್ರೆಯ ಆವರಣದಲ್ಲಿ ಕೊಚ್ಚೆ ಗುಂಡಿ ಹಾಗೂ ಗಿಡ&ಗಂಟಿಗಳು ಬೆಳೆದಿದ್ದು, ಸೊಳ್ಳೆಗಳೊಂದಿಗೆ ವಿಷಜಂತುಗಳ ಕಾಟ ಹೆಚ್ಚಾಗಿದೆ. ಆಸ್ಪತ್ರೆಯಲ್ಲಿ ಕಾವಲುಗಾರರಿಲ್ಲದ ಕಾರಣ ರಾತ್ರಿಯ ವೇಳೆ ಕುಡುಕರ ಹಾವಳಿ ಸಮಸ್ಯೆಯಾಗಿ ಪರಿಣಮಿಸಿದೆ.
ಆಸ್ಪತ್ರೆಯಲ್ಲಿ ಕೆಲವು ಚಿಕಿತ್ಸೆಗಳಿಗೆ ವೈದ್ಯರು ಜನರಿಂದ ಹಣ ಪೀಕುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲು ಅವಕಾಶವಿದ್ದರೂ ತುಮಕೂರು, ತಿಪಟೂರು ನಗರಗಳಿಗೆ ರೋಗಿಗಳನ್ನು ಕಳುಹಿಸುವುದು ಸಾಮಾನ್ಯವಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಯಾವಾಗ ಪರಿಹಾರ ಸಿಗುವುದೋ ಎಂದು ತಾಲೂಕಿನ ಜನರು ಕಾಯುತ್ತಿದ್ದಾರೆ.‘
80 ಹುದ್ದೆಯಲ್ಲಿ 45 ಖಾಲಿ: ಆಸ್ಪತ್ರೆಯಲ್ಲಿ 14 ವೈದ್ಯರಲ್ಲಿ 10 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, 4 ಹುದ್ದೆಗಳು ಖಾಲಿ ಇವೆ. ಅದರಲ್ಲೂ ಮುಖ್ಯವಾಗಿ 3 ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು, ಚರ್ಮರೋಗ ತರಿಲ್ಲ. ಕೀಲು ಮತ್ತು ಮೂಳೆ ತರು ಕಳೆದೆರಡು ವರ್ಷಗಳಿಂದ ರಜೆಯಲ್ಲಿದ್ದು, ಈ ಹುದ್ದೆ ಖಾಲಿ ಇದೆ. ಶುಶ್ರೂಷಕ ಅಧೀಕ್ಷಕರ ದರ್ಜೆಯ 2 ಹುದ್ದೆಯಲ್ಲಿ 1 ಹಾಗೂ ಶುಶ್ರೂಷಕ ಅಧಿಕಾರಿಗಳ 20 ಹುದ್ದೆಗಳಲ್ಲಿ 18 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, 2 ಖಾಲಿ ಇವೆ. ಹಿರಿಯ ಪ್ರಯೋಗ ಶಾಲಾ ತಂತ್ರರು, ಕಿರಿಯ ಪ್ರಯೋಗ ಶಾಲಾ ತಂತ್ರರ ತಲಾ ಒಂದು ಹುದ್ದೆ, ವಿಕಿರಣಶಾಸ ಚಿತ್ರಣ ಅಧಿಕಾರಿಗಳ 2 ಹುದ್ದೆಗಳಲ್ಲಿ ಒಂದು ಹುದ್ದೆ, ಹಿರಿಯ ಫಾರ್ಮಸಿಸ್ಟ್ ಒಂದು ಹುದ್ದೆ, ಸಹಾಯಕ ಆಡಳಿತಾಧಿಕಾರಿ ಒಂದು ಹುದ್ದೆ, ಸಹಾಯಕ ಬೆರಳಚ್ಚುಗಾರರ ಒಂದು ಹುದ್ದೆ, ವಾಹನಚಾಲಕರ ಒಂದು ಹುದ್ದೆ, ಅಡುಗೆಯವರು ಒಂದು ಹುದ್ದೆ, ಡಿ ದರ್ಜೆ ನೌಕರರ ಒಟ್ಟು 32 ಹುದ್ದೆಗಳ ಪೈಕಿ 31 ಹುದ್ದೆಗಳು ಖಾಲಿ ಇವೆ. ಒಟ್ಟು 85 ಹುದ್ದೆಗಳಲ್ಲಿ ಕೇವಲ 40 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, 45 ಹುದ್ದೆಗಳು ಖಾಲಿ ಇವೆ. ಇದರಿಂದ ಆಸ್ಪತ್ರೆಯ ಪ್ರತಿನಿತ್ಯದ ಕಾರ್ಯನಿರ್ವಹಣೆಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಆಸ್ಪತ್ರೆಯಲ್ಲಿ ಸಮಸ್ಯೆ ತಾಂಡವವಾಡುತ್ತಿದ್ದು, ಈ ಬಗ್ಗೆ ಚರ್ಚಿಸಲು ಆರೋಗ್ಯ ಸಮಿತಿ ಸಭೆಯನ್ನು 8 ತಿಂಗಳಿಂದ ನಡೆಸಿಲ್ಲ. ಆಸ್ಪತ್ರೆಯಲ್ಲಿರುವಂತಹ ವೈದ್ಯರು ಸರಿಯಾದ ಸಮಯಕ್ಕೆ ಹಾಜರಾಗುತ್ತಿಲ್ಲ. ಅನೇಕ ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆ ಸೇರಿ ಅನೇಕ ಸಮಸ್ಯೆಗಳಿದ್ದು, ಸಂಬಂಧಪಟ್ಟವರು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು. | ಸಿ.ಎನ್.ಮಂಜುನಾಥ್, ಆಸ್ಪತ್ರೆಯ ಆರೋಗ್ಯ ಸಮಿತಿ ಸದಸ್ಯ ಮತ್ತು ಸುಭಾಷ್ಚಂದ್ರಭೋಸ್ ಆಟೋ ಚಾಲಕರ ಮಾಲೀಕರ ಸಂದ ಅಧ್ಯಕ್ಷ ಆಸ್ಪತ್ರೆಯನ್ನು ನೂರು ಹಾಸಿಗೆಗೆ ಮೇಲ್ದರ್ಜೆಗೆರಿಸಿ, ಅಗತ್ಯ ಸೌಕರ್ಯ ಒದಗಿಸುವಂತೆ ಹಾಗೂ ಖಾಲಿ ಇರುವ ಹುದ್ದೆ ಭರ್ತಿ ಮಾಡುವಂತೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ್ದೇನೆ. ಶ್ರೀ ಆಸ್ಪತ್ರೆಯ ಸಮಸ್ಯೆ ಬಗೆಹರಿಸಲಾಗುವುದು.| ಸಿ.ಬಿ.ಸುರೇಶ್ಬಾಬು ಶಾಸಕ